ಪೌರಕಾರ್ಮಿಕರ ಕೆಲಸದ ಸಮಯ ಬದಲಾವಣೆ

ಮೈಸೂರು, ಏ.1: ಬೇಸಿಗೆ ಕಾಲ ಪ್ರಾರಂಭವಾಗಿದ್ದು ಸುಡು ಬಿಸಿಲಿನಲ್ಲಿ ಕೆಲಸ ಮಾಡಲು ಅಸಾಧ್ಯವಾದ ಕಾರಣ ಪೌರಕಾರ್ಮಿಕರ ಕೆಲಸದ ಸಮಯವನ್ನು ಮೈಸೂರು ಮಹಾನಗರ ಪಾಲಿಕೆ ಬದಲಾವಣೆ ಮಾಡಿದೆ.

ತಾಪಮಾನ ಹೆಚ್ಚುತ್ತಿರುವುದರಿಂದ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಅವರ ಕೆಲಸದ ಸಮಯವನ್ನು ಪರಿಷ್ಕರಿಸಲಾಗಿದೆ.

ಇದುವರೆಗೆ ಬೆಳಗ್ಗೆ 6.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಇದ್ದ ಕೆಲಸದ ಸಮಯವನ್ನು, ಇನ್ನು ಮುಂದೆ ಬೆಳಗ್ಗೆ 5.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಾಯಿಸಲಾಗಿದೆ.

ಈ ಹೊಸ ಸಮಯವು ಏ 1 ರಿಂದಲೇ ಜಾರಿಗೆ ಬಂದಿದೆ.

ಬೇಸಿಗೆ ಕಾಲದಲ್ಲಿ ಉಷ್ಣತೆಯ ಹೆಚ್ಚಳದಿಂದ ಪೌರಕಾರ್ಮಿ ಕರು ಆರೋಗ್ಯ ಸಮಸ್ಯೆ, ದೇಹದ ನೀರಿನ ಕೊರತೆ ಮುಂತಾದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುವುದರಿಂದ, ಅವರ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮದಿಂದ ಪೌರಕಾರ್ಮಿಕರ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ನಗರ ಸ್ವಚ್ಛತಾ ಕಾರ್ಯಗಳು ಪರಿಣಾಮಕಾರಿಯಾಗಿ ಮುಂದುವರಿಯಲಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.