ಮೈಸೂರು: ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಚೈತ್ರ ಶುದ್ಧ ಹುಣ್ಣಿಮೆ ಅಂಗವಾಗಿ ಹನುಮಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಈ ಪವಿತ್ರ ದಿನದಂದು ಆಶ್ರಮದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಭಕ್ತಾದಿಗಳಿಗೆ ವಿಶೇಷ ಸಂದೇಶ ನೀಡಿದರು.
ವಜ್ರಾಂಗಿಯ ರೂಪದಲ್ಲಿ ಕಂಗೊಳಿಸಿದ ಮಾರುತಿ:
ಹನುಮಜ್ಜಯಂತಿ ಪ್ರಯುಕ್ತ ಕಾರ್ಯಸಿದ್ದಿ ಹನುಮಂತನಿಗೆ ವಿಶೇಷ ‘ವಜ್ರಾಲಂಕಾರ’ ಮಾಡಲಾಗಿತ್ತು.
ಬಜರಂಗಿ ಎಂದರೆ ವಜ್ರಾಂಗಿ ಎಂದರ್ಥ. ಸ್ವಾಮಿಯು ಭಕ್ತರಿಗೆ ವಜ್ರದಂತಹ ದೈಹಿಕ ಸಾಮರ್ಥ್ಯವನ್ನು ಮತ್ತು ಹೂವಿನಂತಹ ಮೃದುವಾದ ಮನಸ್ಸನ್ನು ಕರುಣಿಸಲಿ” ಎಂದು ಸ್ವಾಮೀಜಿ ಹಾರೈಸಿದರು.
ಈ ಸಂದರ್ಭದಲ್ಲಿ ಹನುಮಂತನಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ವೀಳ್ಯದೆಲೆ ಅರ್ಚನೆಯ ಮಹತ್ವ
ಭಕ್ತಾದಿಗಳಿಗೆ ವೀಳ್ಯದೆಲೆ ಅರ್ಚನೆಯ ವಿಶೇಷತೆಯನ್ನು ವಿವರಿಸಿದ ಸ್ವಾಮೀಜಿ, “ವೀಳ್ಯದೆಲೆಯು ನಮ್ಮ ಹೃದಯದ ಸಂಕೇತ. ನಮ್ಮ ಮನಸ್ಸು ಮತ್ತು ಹೃದಯವನ್ನು ಸ್ವಾಮಿಗೆ ಅರ್ಪಿಸುವುದೇ ಈ ಅರ್ಚನೆಯ ಮೂಲ ಉದ್ದೇಶ ಎಂದು ತಿಳಿಸಿಕೊಟ್ಟರು.
ಸೀತಾಮಾತೆಯು ಅಶೋಕವನದಲ್ಲಿದ್ದಾಗ ಹನುಮಂತನಿಗೆ ವೀಳ್ಯದೆಲೆಯಿಂದ ಆಶೀರ್ವದಿಸಿದ ನೆನಪಿಗಾಗಿ ಈ ಪದ್ಧತಿ ಬೆಳೆದುಬಂದಿದೆ. ಇದು ಭಕ್ತರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ” ಎಂದು ಶ್ರೀಗಳು ತಿಳಿಸಿದರು.
ಕಾರ್ಯಸಿದ್ದಿ ರಕ್ಷೆ ಮತ್ತು 13ರ ಮಂತ್ರ:
ಸೇವಾರ್ಥಿಗಳಿಗೆ 13 ಗಂಟುಗಳಿರುವ ವಿಶೇಷ ‘ಕಾರ್ಯಸಿದ್ದಿ ರಕ್ಷೆ’ಯನ್ನು ವಿತರಿಸಲಾಯಿತು.
ಈ ಬಗ್ಗೆ ಮಾತನಾಡಿದ ಶ್ರೀಗಳು, “13 ಎಂಬ ಸಂಖ್ಯೆಯು ‘ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಮಂತ್ರದ ಸಂಕೇತ. ಸೀತಾಮಾತೆಯು ಸುಂದರಕಾಂಡದಲ್ಲಿ ಹೇಳಿರುವ ಮಂತ್ರವನ್ನೇ ಜಪಿಸುತ್ತಾ, ಈ ರಕ್ಷೆಯನ್ನು ಧರಿಸಿ 16 ದಿನಗಳ ಕಾಲ ಸ್ವಾಮಿಗೆ ಪ್ರದಕ್ಷಿಣೆ ಹಾಕುವುದರಿಂದ ಸಕಲ ಕಷ್ಟಗಳು ನಿವಾರಣೆಯಾಗಿ ಕಾರ್ಯಸಿದ್ದಿಯಾಗುವುದು ಖಂಡಿತ ಎಂದು ಹೇಳಿ ಭಕ್ತರಿಗೆ ಆಶೀರ್ವಚನ ನೀಡಿದರು.
ಆಶ್ರಮದ ಹಿರಿಯ ಪೀಠಾಧಿಪತಿಗಳಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ ಆರು ಹನುಮಜ್ಜಯಂತಿಗಳನ್ನು ಆಚರಿಸಲಾಗುತ್ತದೆ.
ಈ ಬಾರಿಯ ಚೈತ್ರ ಪೂರ್ಣಿಮೆಯಂದು ನಡೆದ ಹನುಮಜಯಂತಿ ಆಚರಣೆಯಲ್ಲಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದು ಪುನೀತರಾದರು.

