(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)
ಚಾಮರಾಜನಗರ: ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಸೇವೆ ಸದಾ ಸ್ಮರಣೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮುತ್ತುರಾಜು ಅವರು ಹೇಳಿದರು.
ನಗರದ ಸಶಸ್ತ್ರ ಮೀಸಲು ಪಡೆಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಏಪ್ರಿಲ್ 2 ರಂದು ಜಾರಿಗೆ ಬಂದಿತು. ಇದರ ಅಂಗವಾಗಿ ಪೊಲೀಸ್ ಧ್ವಜಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಎಲ್ಲ ಪೊಲೀಸ್ ಘಟಕಗಳಲ್ಲೂ ಕೂಡ ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಪೊಲೀಸರ ಸೇವೆಯನ್ನು ಸ್ಮರಿಸಿ ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ. ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಎಲ್ಲ ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅವರ ಕುಟುಂಬದವರ ಆರೋಗ್ಯ ಸಲುವಾಗಿ ಉಪಯೋಗಿಸಲಾಗುತ್ತದೆ ಎಂದು ಎಸ್ ಪಿ ತಿಳಿಸಿದರು.
2025 -26 ರ ಸಾಲಿನಲ್ಲಿ ವೈದ್ಯಕೀಯ ಧನ ಸಹಾಯವಾಗಿ ಒಟ್ಟು7,39.000 ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪಿಎಸ್‌ಐ ಮಾದೇಗೌಡ ಮಾತನಾಡಿ ಮೈಸೂರು- ಚಾಮರಾಜನಗರ ಜಿಲ್ಲಾ ಪೊಲೀಸ್ ಘಟಕದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಸುದೀರ್ಘವಾದ ಸೇವಾ ಅವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದೇನೆ ಎಂದು ಹೇಳಿದರು.
ಇಲಾಖೆಯಲ್ಲಿ ಕರ್ತವ್ಯದ ಒತ್ತಡ ಹೆಚ್ಚು ಇರುತ್ತದೆ.ಆದರೂ ಕೂಡ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾಗಿದೆ.ಇಲಾಖೆಯಲ್ಲಿ ತನಿಖೆಗಳು ಬಂದಾಗ ಇತರ ಇಲಾಖೆಗಳ ಸಹಕಾರ ಸಹಯೋಗ ಕಡಿಮೆ.ಈ ನಿಟ್ಟಿನಲ್ಲಿ ಸಂಬಂದಿಸಿದ ಇಲಾಖೆಗಳು ಪಾತ್ರ ವಹಿಸಿಕೊಂಡಾಗ ಇಲಾಖೆಯ ಹೊರೆ ಕೂಡ ಕಡಿಮೆಯಾಗಲಿದೆ .ಈ ನಿಟ್ಟಿನಲ್ಲಿ ವರೀಷ್ಟಾದಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದು ಇಲಾಖೆಯ ಕಾರ್ಯವೈಖರಿಯ ಹೊರೆ ತಗ್ಗಿಸಬೇಕಿದೆ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌರವ ವಂದನೆ ಸ್ವೀಕರಿಸಿದ ನಿವೃತ್ತ ಪಿಎಸ್‌ಐ ಮಾದೇಗೌಡ ಅವರು 26-1-1966 ರಲ್ಲಿ ಗುಂಡ್ಲುಪೇಟೆ ಹಂಗಳದಲ್ಲಿ ಜನಿಸಿ. 14-8-1989 ರಲ್ಲಿ ಮೈಸೂರು ಜಿಲ್ಲೆಯಲ್ಲಿ ಪೇದೆಯಾಗಿ ನೇಮಕಗೊಂಡರು.
ನಂತರ ಚಾ.ನಗರ ಪಟ್ಟಣ ಠಾಣೆ,ಹುಣಸೂರು, ತಲಕಾಡು, ನರಸೀಪುರ ಜಿಲ್ಲೆ ವಿಭಜನೆ ನಂತರ ಚಾ.ನಗರದಲ್ಲಿ ಮುಖ್ಯಪೇದೆ,ಎಎಸ್ಐ ಆಗಿ ಕೊಳ್ಳೆಗಾಲ ಅಗರ ಮಾಂಬಳ್ಳಿ ಮಹಿಳಾ ಠಾಣೆಯಲ್ಲಿ ಕಾರ್ಯನಿರ್ವಹಿಸಿ 31-1-2026 ರಲ್ಲಿ ನಿವೃತ್ತಿಯಾದರು.

