ದಾವಣಗೆರೆ: ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಚಲವಾದಿ ನಾರಾಯಣಸ್ವಾಮಿ ಅವರಿಗೆಲ್ಲ ನಮ್ಮನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಮತ್ತು ಚಲವಾದಿ ನಾರಾಯಣಸ್ವಾಮಿ ಅವರುಗಳು
ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿದ್ದಾರೆ,ಇವರೆಲ್ಲಾ ಮೊದಲೆಲ್ಲಾ ಬಿಜೆಪಿ, ಆರ್ ಎಸ್ ಎಸ್, ಮೋದಿಯವರ ಬಗ್ಗೆ ಏನೇನು ಮಾತಾಡಿದ್ದಾರೆ ಎನ್ನುವುದು ನಿಮಗೆ ಗೊತ್ತಿಲ್ಲವಾ ಇವರಿಗೆಲ್ಲಾ ನಮ್ಮನ್ನು ಟೀಕಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಜನ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಬಿಜೆಪಿ ಬಡವರ ಈ ಗ್ಯಾರಂಟಿಗಳನ್ನು ವಿರೋಧಿಸುತ್ತಿದೆ. ಹೀಗೆ ಬಡವರ ವಿರೋಧಿ, ಸಂವಿಧಾನ ವಿರೋಧಿಯಾಗಿರುವ ಬಿಜೆಪಿ ಯನ್ನು ಬೆಂಬಲಿಸಲು ರಾಜ್ಯದ ಜನರಿಗೆ ಕಾರಣವೇ ಇಲ್ಲ ಎಂದು ಹೇಳಿದರು.
ನಾವು ಕುಟುಂಬ ರಾಜಕಾರಣ ಮಾಡಲ್ಲ. ಜನರೇ ನಮ್ಮನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಿದ್ದಾರೆ ಎನ್ನುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ,ಹಾಗಾದರೆ ಚನ್ನಪಟ್ಟಣದಲ್ಲಿ ಅವರ ಮಗ ಸೋತಿದ್ದು ಏಕೆ, ಜನ ಬಯಸಿದಾಗ ಚುನಾವಣೆಗೆ ಸ್ಪರ್ಧಿಸುವುದು ತಪ್ಪಲ್ಲ. ಜನ ತಿರಸ್ಕರಿಸಿದಾಗಲೂ ಆ ರೀತಿ ಮಾತಾಡುತ್ತಾರಲ್ಲಾ ಎಂದು ತಿಳಿಸಿದರು.
ಸಚಿವ ಜಮೀರ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲಿಲ್ಲ ಎಂಬ ಇನ್ನೊಂದು ಪ್ರಶ್ನೆಗೆ, ಜಮೀರ್ ಅವರು ಕೇರಳ, ಬಾಗಲಕೋಟೆ ಸೇರಿ ಎಲ್ಲಾ ಕಡೆ ಕೆಲಸ ಮಾಡಿದ್ದಾರೆ. ಹಾಗೆಯೇ ದಾವಣಗೆರೆಯಲ್ಲೂ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಜಮೀರ್ ಅವರು ಪಕ್ಷದ ಸಿಪಾಯಿ. ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರಿಗೆ, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಸಿಎಂ ಸಮರ್ಥಿಸಿಕೊಂಡರು.
ಚಲುವಾದಿ ನಾರಾಯಣಸ್ವಾಮಿ ಮೊದಲು ಕಾಂಗ್ರೆಸ್ ನಲ್ಲಿದ್ದು ಇಲ್ಲಿ ಲಾಭ ಪಡೆದು ಈಗ ಬಿಜೆಪಿಗೆ ಹೋಗಿ ಅಲ್ಲೂ ಲಾಭ ಮಾಡಿಕೊಂಡಿದ್ದಾರೆ, ಅವರು ಬಿಜೆಪಿ ಬಗ್ಗೆ ಏನೇನು ಮಾತಾಡಿದ್ದಾರೆ ಗೊತ್ತಾ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.
ದೇವೇಗೌಡರು ಮತ್ತು ಕುಮಾರಸ್ವಾಮಿ ಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈಗ ಬಿಜೆಪಿ ಜೊತೆ ಸೇರಿದ್ದಾರೆ. ಇದುವರೆಗೂ ಅವರು ಬಿಜೆಪಿ,ಆರ್ ಎಸ್ ಎಸ್ ಬಗ್ಗೆ ಏನೇನು ಮಾತಾಡಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿದ್ದ ಜೆಡಿಎಸ್ ಆ ನಂತರ ಅಷ್ಟು ಸೀಟು ಗೆಲ್ಲಲೇ ಇಲ್ಲ.19 ಕ್ಕೆ ಇಳಿದಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದರು.

