ಮುಂಬೈ: ಭಾರತೀಯ ಸಂಗೀತ ಲೋಕದ ದಿಗ್ಗಜರೂ, ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರು ಮುಂಬೈನಲ್ಲಿ ಭಾನುವಾರ ವಿಧಿವಶರಾದರು.
ಇದರಿಂದಾಗಿ ಸಂಗೀತ ಲೋಕದ ಅದ್ಭುತ ಕಂಠದ ಕೊಂಡಿ ಕಳಚಿದಂತಾಗಿದೆ.
ಶ್ವಾಸಕೋಶದ ಸಮಸ್ಯೆಗಳಿಂದ ಬಳಲುತ್ತಿದ್ದ ಆಶಾ ಬೋಸ್ಲೆ ಅವರಿಗೆ 92 ವರ್ಷಗಳಾಗಿತ್ತು. ಅವರಿಗೆ ಶನಿವಾರ ಸಂಜೆ ಹೃದಯಾಘಾತ ವಾಗಿತ್ತು. ತಕ್ಷಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆಗೆ ಅವರು ಭಾನುವಾರ ಇಹಲೋಕ ತ್ಯಜಿಸಿದರು.
ಆಶಾ ಅವರ ಪಾರ್ಥಿವ ಶರೀರವನ್ನು ಎಪ್ರಿಲ್ 13 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಅವರ ಮುಂಬೈ ನಿವಾಸದಲ್ಲಿ ಸಂಬಂಧಿಕರು ಮತ್ತು ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತದೆ,ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಶಾ ಪುತ್ರ ಆನಂದ್ ಬೋಸ್ಲೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆಶಾ ಭೋಸ್ಲೆ ಅವರು ‘ಭಾರತದ ನೈಟಿಂಗೇಲ್ ಎಂದೇ ಪ್ರಸಿದ್ಧರಾಗಿದ್ದ ಗಾಯಕಿ ಲತಾ ಮಂಗೇಶ್ಕರ್ ಅವರ ಸಹೋದರಿ.ಜತೆಗೆ ಅವರ ಇತರೆ ಸಹೋದರಿಯರು ಮತ್ತು ಇಡೀ ಕುಟುಂಬವೇ ಸಂಗೀತಗಾರರು.
ಅಕ್ಕನಂತೆ ಭಾರತೀಯ ಸಂಗೀತ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿ ಹೆಸರುವಾಸಿಯಾಗಿದ್ದರು.
8 ದಶಕಗಳಿಗೂ ಹೆಚ್ಚಿನ ಅವಧಿಯ ವೃತ್ತಿಜೀವನದಲ್ಲಿ ಅವರು ಹಲವಾರು ಭಾರತೀಯ ಭಾಷೆಗಳ ಹಾಡುಗಳಿಗೆ ಕಂಠದಾನ ಮಾಡಿ ಸಂಗೀತಪ್ರಿಯರ ಮನಸೂರೆಗೊಂಡಿದ್ದರು.
ಬಹು ಭಾಷೆಗಳ ನೂರಾರು ಸಿನಿಮಾಗಳಿಗೂ ಅವರು ಧ್ವನಿಯಾಗಿದ್ದಾರೆ. ಖಾಸಗಿ ಆಲ್ಬಮ್‌ಗಳಲ್ಲಿಯೂ ಹಾಡಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಲೈವ್ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಹಾಡಿದ ಕೊನೆಯ ಹಾಡೆಂದರೆ, 2022 ರಲ್ಲಿ ಜಾಕಿ ಶ್ರಾಫ್ ಅವರು ನಟಿಸಿದ್ದ ಲೈಫ್ಸ್ ಗುಡ್ ಸಿನಿಮಾದ ರುತ್ ಭೀಗೆ ತಾನ್.
ಸಂಗೀತ ಕ್ಷೇತ್ರಕ್ಕೆ ಆಶಾ ಅವರು ನೀಡಿದ ಅದ್ಭುತ ಕೊಡುಗೆಗಾಗಿ ಹಲವಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.
2000ನೇ ಇಸ್ವಿಯಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, 2008ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ಸೇರಿದಂತೆ ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳು ಲಭಿಸಿವೆ. 2011ರಲ್ಲಿ, ಸಂಗೀತ ಇತಿಹಾಸದಲ್ಲಿ ಹೆಚ್ಚು ಧ್ವನಿಮುದ್ರಣಗೊಂಡ ಕಲಾವಿದೆ ಎಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಕೂಡ ಆಶಾ ಬೋಸ್ಲೆ ಹೆಸರಿನಲ್ಲಿದೆ.

