ವಿದೇಶಿ ಮಹಿಳೆ ಅತ್ಯಾಚಾರ ಆರೋಪ ಪ್ರಕರಣ:ಹೋಂಸ್ಟೆ ಬಂದ್

ಪೊನ್ನಂಪೇಟೆ: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ವಿದೇಶಿ ಮಹಿಳೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಹೋಂಸ್ಟೆ ಪರವಾನಗಿಯನ್ನು ರದ್ದು ಮಾಡಿ ಬಂದ್ ಮಾಡಲಾಗಿದೆ.

ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ಆರೋಪಿತ ಹೋಂಸ್ಟೇಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಕಳೆದ ಕೆಲವು ದಿನಗಳ ಹಿಂದೆ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕುಟ್ಟ ಗ್ರಾಮದ ಖಾಸಗಿ ಹೋಂಸ್ಟೇಗೆ ಬಂದಿದ್ದರು.

ಈ ವೇಳೆ ಹೋಂಸ್ಟೇ ಕುಕ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಮಹಿಳೆಯ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ದೌರ್ಜನ್ಯ ಎಸಗಿದ್ದ ಎಂದು ದೂರಲಾಗಿದೆ.

ಘಟನೆ ನಡೆದ ಬಳಿಕ ಮಹಿಳೆ ಸಹಾಯಕ್ಕಾಗಿ ಯತ್ನಿಸಿದಾಗ, ಹೋಂಸ್ಟೇ ಮಾಲೀಕ ವಿಶಾಲ್ ಸುಮಾರು ಮೂರು ದಿನಗಳ ಕಾಲ ವೈಫೈ ಸಂಪರ್ಕ ಕಡಿತಗೊಳಿಸಿ, ಮಹಿಳೆಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಬಿಡದೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ವೃಜೇಶ್ ಕುಮಾರ್ ಹಾಗೂ ಮಾಲೀಕ ವಿಶಾಲ್‌ನನ್ನು ಬಂಧಿಸಿದ್ದಾರೆ.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಪ್ರವಾಸೋದ್ಯಮ ಇಲಾಖೆ,ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ.

ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸಿಗರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.