ಮೈಸೂರು: ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮಗ್ರ ಪರಿಶೀಲನೆ ನಡೆಸಿ, ತಾಯಿ-ಮಕ್ಕಳ ಆರೈಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸಂಸದರು, ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಇಂತಹ ಪ್ರಕರಣ ವರದಿಯಾಗಿರುವುದು ವಿಷಾದನೀಯ ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ಬಂದ ವರದಿಗಳು ನೋಡಿದ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳೊಂದಿಗೆ, ರೋಗಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಶೀಲನೆ ನಡೆಸಲಾಯಿತು ಎಂದು ಹೇಳಿದ್ದಾರೆ.
ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು. ಇದೇ ರೀತಿಯ ಧೋರಣೆ ಮುಂದುವರಿದರೆ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ ಸಂಸದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳು, ಎನ್‌ಐಸಿಯು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಎಲ್ಲ ವಿಭಾಗದಲ್ಲೂ ಎಲ್ಲ ವೈದ್ಯಕೀಯ ಸಾಧನಗಳನ್ನು ಸೂಕ್ತ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ.
ನಿರ್ವಹಣೆಗಾಗಿ ಮೀಸಲಿರುವ ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಡೀನ್ ಮತ್ತು ವೈದ್ಯಾಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಯದುವೀರ್ ಒಡೆಯರ್ ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ರೋಗಿಗಳೊಂದಿಗೆ ಸಂಸದ ಯದುವೀರ್ ಒಡೆಯರ್ ಸಮಾಲೋಚನೆ ನಡೆಸಿದಾಗ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವ ಬಗ್ಗೆ ಸಮಸ್ಯೆ ತೋಡಿಕೊಂಡರು.
ಇದಕ್ಕೆ ತಕ್ಷಣ ಸ್ಪಂದಿಸಿದ ಯದುವೀರ್ ಒಡೆಯರ್ ಕೂಡಲೆ ಬಿಸಿನೀರಿನ ಡಿಸ್ಪೆನ್ಸರ್ ಅನ್ನು ತಮ್ಮ ವೈಯಕ್ತಿಕ ಹಣದಿಂದ ತರಿಸಿ ರೋಗಿಗಳಿಗೆ ನೀಡುವ ಮೂಲಕ ಹತ್ತೇ ನಿಮಿಷದಲ್ಲಿ ಸಮಸ್ಯೆ ಬಗೆಹರಿಸಿದರು.
ಇದಕ್ಕೆ ಸಂತೋಷ ವ್ಯಕ್ತಪಡಿಸಿದ ರೋಗಿಗಳು, ಪೋಷಕರು, ನಮ್ಮ ಸಂಸದರು ತಕ್ಷಣ ಸೌಲಭ್ಯ ಒದಗಿಸಿರುವುದು ಬಹಳ ಖುಷಿಯಾಗಿದೆ. ಈ ಸಂಸದರು ನಮಗೆ ಎಂದಿಗೂ ಇರಬೇಕು. ಇಂಥ ಸಹೃದಯ ಸಂಸದರಿಂದ ನಮಗೆ ಹಲವಾರು ಅನುಕೂಲಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಯದುವೀರ್ ಒಡೆಯರ್, ತಮ್ಮ ಪೂರ್ವಿಕರು ಸ್ಥಾಪಿಸಿರುವ ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗೆ ಆದ್ಯತೆ ನೀಡಲು ಎಲ್ಲರೂ ಬದ್ಧರಾಗಿರಬೇಕು. ರೋಗಿಗಳು ಹಾಗೂ ಪೋಷಕರು ಬಯಸಿದಂತೆ ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

