ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರನ್ನ ನಂಬಿ ಮೋಸಹೋಗಬೇಡಿ ಎಂದು ಪೊಲೀಸರು ಪದೇ,ಪದೇ ಮನವಿ ಮಾಡ್ತಾರೆ,ಜಾಗೃತಿ ಕೂಡಾ ಮೂಡಿಸ್ತಾ ಇದಾರೆ.ಆದರೂ ನಮ್ಮ ಜನ ಮೋಸ ಹೋಗೋದಂತು ತಪ್ಪಲೇ ಇಲ್ಲ.
ಈಗ ಮೈಸೂರಿನ ಮಹಿಳೆ ಹೀಗೆ ನಂಬಿ ಲಕ್ಷಾಂತರ ರೂ ಕಳೆದುಕೊಂಡಿದ್ದಾರೆ.
ಫೇಸ್ ಬುಕ್ ಮೂಲಕ ಪರಿಚಯವಾದ ಲಂಡನ್ ನಿವಾಸಿಯೊಬ್ಬ ಮೈಸೂರಿನ ಗೃಹಿಣಿಗೆ 12.65 ಲಕ್ಷ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶಕ್ತಿನಗರದ ನಿವಾಸಿ ಸರ್ಕಾರಿ ಉದ್ಯೋಗಿ ಪತ್ನಿ ವೇದಾ ಹಣ ಕಳೆದುಕೊಂಡವರು.
2025 ರಲ್ಲಿ ಫೇಸ್ ಬುಕ್ ಮೂಲಕ ಡಾ.ಜೋಸೆಫ್ ಆಲಿ ಎಂಬಾತ ವೇದಾ ಅವರಿಗೆ ಪರಿಚಯವಾಗಿದ್ದಾನೆ.
ತಾನು ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡಿದ್ದಾನೆ.ನಂತರ ವೇದಾಗೆ ತನ್ನ 9 ವರ್ಷದ ಮಗನನ್ನೂ ಪರಿಚಯಿಸಿದ್ದಾನೆ.ಮಗು ಹಾಗೂ ವೇದಾ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ.
ನಂತರದ ದಿನಗಳಲ್ಲಿ ಡಾ.ಜೋಸೆಫ್ ಆಲಿ ಹಾಗೂ ವೇದಾ ನಡುವೆಯೂ ಉತ್ತಮ ಬಾಂಧವ್ಯ ಬೆಳೆದಿದೆ.ತಾನು ಇಂಡೋನೇಷಿಯಾಗೆ ಹೋಗುತ್ತಿದ್ದೇನೆ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಟಿಕೆಟ್ ಖರೀದಿಸಲು ಹಣ ಸಹಾಯ ಕೇಳಿದ್ದಾನೆ.ವೇದಾ ವಿವಿದ ಹಂತಗಳಲ್ಲಿ 1,85,000 ವರ್ಗಾಯಿಸಿದ್ದಾರೆ.
ಕೆಲವು ದಿನಗಳ ನಂತರ ನಾನು ಇಂಡಿಯಾಗೆ ಬಂದಿರುವುದಾಗಿ ತಿಳಿಸಿ 25 ಲಕ್ಷ ನಿಮ್ಮ ಖಾತೆಗೆ ವರ್ಗಾಯಿಸುತ್ತಿರುವುದಾಗಿ ವೇದಾ ಅವರನ್ನ ಕಿಲಾಡಿ ನಂಬಿಸಿದ್ದಾನೆ.
ಇಂಡಿಯನ್ ಕರೆನ್ಸಿಗೆ ಬದಲಾಯಿಸಲು ಚಾರ್ಜಸ್ ಎಂದು 10,80,000 ಪೀಕಿಸಿದ್ದಾನೆ.ಇದಾದ ನಂತರ ಮತ್ತೆ 1,55,000 ರೂ ವರ್ಗಾಯಿಸುವಂತೆ ಕೇಳಿದಾಗ ವೇದಾಗೆ ಅನುಮಾನ ಬಂದಿದೆ.
ನಂತರ ವಂಚಕ ಸಂಪರ್ಕ ಕಳೆದುಕೊಂಡಿದ್ದಾನೆ.ಇಂಗು ತಿಂದ ಮಂಗನಂತಾದ ವೇದಾ ಎಲ್ಲಾ ಮುಗಿದ ಮೇಲೆ ಒಟ್ಟು 12.65 ಲಕ್ಷ ಹಣ ಕಳೆದುಕೊಂಡು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

