ನವದೆಹಲಿ: 10 ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ತೆರೆ ಬಿದ್ದಿದ್ದು ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರಂತರ ಸಭೆಗಳನ್ನು ನಡೆಸಿದ ಬಳಿಕ ವಿ.ಡಿ. ಸತೀಶನ್ ಹೆಸರನ್ನು ಅಂತಿಮಗೊಳಿಸಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳೊಂದಿಗೆ ಭರ್ಜರಿ ಬಹುಮತ ಪಡೆದಿದ್ದರೂ ಮುಖ್ಯಮಂತ್ರಿ ಆಯ್ಕೆ ಗೊಂದಲ ಮಯವಾಗಿತ್ತು
ಸಿಎಂ ಗಾದಿಗಾಗಿ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಯುಡಿಎಫ್ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ವಿ.ಡಿ. ಸತೀಶನ್ ಅವರ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿತ್ತು.
ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೆ.ಸಿ.ವೇಣುಗೋಪಾಲ್ ಅವರಿಗೆ ಶಾಸಕರ ಬೆಂಬಲವೂ ಇದ್ದುದರಿಂದ ಅವರೇ ಸಿಎಂ ಆಗುತ್ತಾರೆ ಎನ್ನಲಾಗಿತ್ತು.
ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಎಲ್‌ಡಿಎಫ್ ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡಿದ್ದ ವಿ.ಡಿ. ಸತೀಶನ್ ತನಗೆ ಸಿಎಂ ಪಟ್ಟ ನೀಡದಿದ್ದರೆ ಬೇರೆ ಯಾವುದೇ ಸಚಿವ ಸ್ಥಾನ ಬೇಡ ಎಂಬ ಬಿಗಿ ನಿಲುವನ್ನು ತಳೆದಿದ್ದರು.
ಅಂತೂ ಇಂತೂ ಕಡೆಗೂ ವಿ.ಡಿ. ಸತೀಶನ್ ಅವರಿಗೇನೆ ಕೇರಳ ಸಿಎಂ ಪಟ್ಟ ದಕ್ಕಿದೆ,ಗೊಂದಲ ಬಗೆ ಹರಿದಿದೆ.
ವಿ.ಡಿ. ಸತೀಶನ್ ಮನೆ ಹಾಗೂ ಕಚೇರಿ ಬಳಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.

