12 ನೇ ತರಗತಿವರೆಗೆ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು: ಸಿಎಂ

ಮೈಸೂರು: ಪ್ರಾಥಮಿಕ ತರಗತಿಯಿಂದ 12 ನೇ ತರಗತಿಯವರೆಗೆ ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಧರಿಸಬಹುದು ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಈಗಾಗಲೇ ಸಾಂಪ್ರದಾಯಿಕವಾಗಿ ಅನುಸರಿಸುವ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು‌ ಆದರೆ ಹೊಸದಾಗಿ ಮಾಡುವಂತಿಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಡೀಸಲ್ ಬಳಕೆ ಕಡಿತಗೊಳಿಸಲು ತಮ್ಮ ಬೆಂಗಾವಲನ್ನು ಕಡಿತಗೊಳಿಸಿದ್ದು ಈ ಬಗ್ಗೆ ಕರ್ನಾಟಕದಲ್ಲಿಯೂ ಮಾಡಬಹುದೇ ಎಂಬ ಪ್ರಶ್ನೆಗೆ, ಅದು ತಾತ್ಕಾಲಿಕ ಕ್ರಮವಷ್ಟೇ. ಪ್ರಧಾನಿಗಳು ಹೇಳಿರುವುದು ಸರಿಯಾದ ಕ್ರಮವಲ್ಲ ಅದಕ್ಕೆ ಬದಲು ಬೇರೆ ದೇಶಗಳೊಂದಿಗೆ ಮಾತನಾಡಿ ಒಮ್ಮತಕ್ಕೆ ಬರುವುದು ಸೂಕ್ತ ಎಂದು ಉತ್ತರಿಸಿದರು.

ಸಂಪುಟ ಪುನರ್ ರಚನೆಗೆ ಸಂಬಂಧಿಸಿದಂತೆ ದೆಹಲಿಗೆ ಪ್ರಯಾಣ ಬೆಳಸುತ್ತೀರಾ ಎಂಬ ಇನ್ನೊಂದು ಪ್ರಶ್ನೆಗೆ, ಸಂಪುಟ ಪುನರ್ ರಚನೆ ಮಾಡುವ ಉದ್ದೇಶವಿದೆ ಎಂದು ಸಿಎಂ ಹೇಳಿದರು.

ನೀಟ್ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.