17 ವರ್ಷದ ಬಾಕ್ಸರ್‌ಗೆ ಲೈಂಗಿಕ ಕಿರುಕುಳ: ಕೋಚ್ ಬಂಧನ

ಬೆಂಗಳೂರು: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಬೆಂಗಳೂರಿನಲ್ಲೂ ಇದೇ ಕತೆಯಾಗಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷದ ಬಾಕ್ಸರ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 50 ವರ್ಷದ ಕೋಚ್‌ ಅರೆಸ್ಟ್ ಆಗಿದ್ದಾರೆ.

ಬಂಧಿತ ಆರೋಪಿ ಕೋಚ್ ರಾಮಚಂದ್ರ. ಈತ ಕಂಠೀರವ ಕ್ರೀಡಾಂಗಣದಲ್ಲಿರುವ ಕ್ಲಬ್ ಒಂದರಲ್ಲಿ ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿದ್ದ. 17 ವರ್ಷದ ಬಾಕ್ಸರ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತೆಯ ತಾಯಿ ಕೋಚ್ ರಾಮಚಂದ್ರ ಕಳೆದ ಆರು ತಿಂಗಳಿಂದ ಮಗಳೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಕೋಚ್ ರಾಮಚಂದ್ರನನ್ನು ಬಂಧಿಸಿ, ಪೋಕ್ಸೊ ಕಾಯಿದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ತನಿಖೆ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಪಟುಗಳ ಮೇಲೆ, ವಿಶೇಷವಾಗಿ ಮಹಿಳಾ ಮತ್ತು ಅಪ್ರಾಪ್ತ ಕ್ರೀಡಾಪಟುಗಳ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿದ್ದು, ತರಬೇತಿ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸುವಂತೆ ಕ್ರೀಡಾ ಪ್ರೇಮಿಗಳು ಆಗ್ರಹಿಸಿದ್ದಾರೆ.