189 ಕೋಟಿ ರೂ. ಚಿನ್ನ ವಂಚನೆ ಪ್ರಕರಣ ಭೇದಿಸಿದ ಪೊಲೀಸರು

ಮೈಸೂರು: ಕೆ.ಆರ್ ನಗರದಲ್ಲಿ ನಡೆದಿದ್ದ 189 ಕೋಟಿ ರೂ. ಚಿನ್ನ ವಂಚನೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಕೆ.ಆರ್. ನಗರದ ಚಿನ್ನದ ವ್ಯಾಪಾರಿ ಜಿತೇಂದ್ರ ಕುಮಾರ್ ಖಂಡೇಲ್‌ವಾಲ್ ಅವರಿಗೆ ವಾಟ್ಸ್‌ಆಪ್ ಮೂಲಕ ಅಪರಿಚಿತರು ಪ್ರತಿ ಗ್ರಾಂ ಚಿನ್ನಕ್ಕೆ 600 ರೂ. ಎಂದು ಆಮಿಷವೊಡ್ಡಿ, 100 ಗ್ರಾಂ ಚಿನ್ನಕ್ಕೆ 13.69 ಲಕ್ಷ ರೂ. ಪಡೆದು ವಂಚಿಸಿದ್ದರು.

ಈ ಸಂಬಂಧ ನಿನ್ನೆ ಮೈಸೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸ್ ನಿರೀಕ್ಷಕ ಸುನಿಲ್ ಎಸ್.ಪಿ ನೇತೃತ್ವದ ತಂಡ, ಪಂಜಾಬ್‌ನ ಅಮೀತ್ ಸಿಂಗ್, ಬಿಹಾರದ ಯತಿನ್ ರಮೇಶ್ ಜೈನ್ ಹಾಗೂ ಮಹಾರಾಷ್ಟ್ರದ ಮೊಹಮ್ಮದ್ ಶಾದಾಬ್ ಅಂಜುಮ್ ಎಂಬ ಆರೋಪಿಗಳನ್ನು ಪತ್ತೆಹಚ್ಚಿದೆ.

2 ಮತ್ತು 3ನೇ ಆರೋಪಿಗಳನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದ್ದು,1ನೇ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಆರೋಪಿಗಳು ಸಾರ್ವಜನಿಕರ ದಾಖಲೆ ದುರ್ಬಳಕೆ ಮಾಡಿ 56 ಬ್ಯಾಂಕ್ ಖಾತೆ ತೆರೆದಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಈ ಖಾತೆಗಳ ಮೇಲೆ 196 ಸೈಬರ್ ದೂರುಗಳು ದಾಖಲಾಗಿವೆ. ಒಟ್ಟು 189.49 ಕೋಟಿ ರೂ. ವಂಚನೆ ಮಾಡಿರುವುದು ತನಿಖೆ‌ ವೇಳೆ ಗೊತ್ತಾಗಿದೆ.

ಎಸ್‌ಪಿ ಶ್ಲಾಘನೆ: ಪ್ರಕರಣ ಭೇದಿಸಿದ ಡಿವೈಎಸ್‌ಪಿ ಶ್ರೀಕಾಂತ್ ಆರ್, ಪಿಐ ಸುನಿಲ್ ಎಸ್.ಪಿ, ಪಿಎಸ್‌ಐ ಲಕ್ಷ್ಮೀ, ಸಿಬ್ಬಂದಿ ಮಂಜುನಾಥ ಎಸ್, ರಂಗಸ್ವಾಮಿ ಹೆಚ್.ಬಿ, ಅಭಿಷೇಕ್ ಪಿ.ಎಸ್, ಮಹೇಶ್ ಸಿ.ಎನ್ ಸೇರಿದಂತೆ ತಂಡದ ಎಲ್ಲ ಅಧಿಕಾರಿ-ಸಿಬ್ಬಂದಿಯನ್ನು ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅಭಿನಂದಿಸಿದ್ದಾರೆ.