ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ: ಸಿದ್ದರಾಮಯ್ಯ

ಬೆಂಗಳೂರು: ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಪತ್ರ ನೀಡಿದ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ನಗರದಲ್ಲಿ ಇಲ್ಲದ ಕಾರಣ, ನಾನು ನನ್ನ ರಾಜೀನಾಮೆ ಪತ್ರವನ್ನು ಅವರ ವಿಶೇಷ ಕಾರ್ಯದರ್ಶಿಗೆ ನೀಡಿದ್ದೇನೆ ಎಂದು ಹೇಳಿದರು.

ಸಾಂವಿಧಾನಿಕ ನಿಬಂಧನೆಗಳ ಪ್ರಕಾರ ರಾಜ್ಯಪಾಲರು ನನ್ನ ರಾಜೀನಾಮೆಯನ್ನು ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಹೈಕಮಾಂಡ್ ಹೇಳಿದಾಗ ರಾಜೀನಾಮೆ ನೀಡುತ್ತೇನೆ ಎಂದು ನಾನು ಪದೇ ಪದೇ ಹೇಳುತ್ತಿದ್ದೆ. ಹೈಕಮಾಂಡ್ ಎರಡು ದಿನಗಳ ಹಿಂದೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು, ಅದರಂತೆ ಇಂದು ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಎರಡು ಬಾರಿ ಕರ್ನಾಟಕದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

550 ಭರವಸೆಗಳಲ್ಲಿ, ಸುಮಾರು 300 ಭರವಸೆಗಳನ್ನು ಇಲ್ಲಿಯವರೆಗೆ ಈಡೇರಿಸಲಾಗಿದೆ, ಜೊತೆಗೆ ಐದು ಗ್ಯಾರಂಟಿಗಳು. ನಾನು ನೀಡಿದ ಭರವಸೆಗಳಿಂದ ವಿಮುಖನಾಗಿಲ್ಲ ಎಂದು ಹೇಳಿದರು.

ವಿರೋಧ ಪಕ್ಷಗಳು ನನ್ನ ವಿರುದ್ಧ ಹಲವು ಸುಳ್ಳು ಕಥೆಗಳನ್ನು ಕಟ್ಟಿವೆ,ನಾನು ಹಣದ ಬೆನ್ನಟ್ಟಿಲ್ಲ ಅಥವಾ ಆಸ್ತಿಗಳನ್ನು ಮಾಡಿಕೊಳ್ಳಲು ಹಂಬಲಿಸಿಲ್ಲ, ನನ್ನ ರಾಜಕೀಯ ಜೀವನವು ತೆರೆದ ಪುಸ್ತಕ ಎಂದು ಸಿದ್ದರಾಮಯ್ಯ ತಿಳಿಸಿದರು.

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಸ್ಪಷ್ಟಪಡಿಸಿದರು.

ಹೈಕಮಾಂಡ್ ರಾಜ್ಯಸಭೆಗೆ ಹೋಗಿ ಅಂತ ನನಗೆ ಹೇಳಿದರು. ನಾನು ಬಹಳ ವಿನಮ್ರವಾಗಿ ಆಗಲ್ಲ ಅಂತ ಹೇಳಿದೆ. ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಅಂತ ಹೇಳಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಜನ ನನ್ನನ್ನು ಐದು ವರ್ಷಗಳ ಕಾಲ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಎರಡು ವರ್ಷ ಇದೆ. ಅಲ್ಲಿವರೆಗೆ ಕರ್ನಾಟಕ ಹಾಗೂ ನನ್ನ ಕ್ಷೇತ್ರದ ಜನತೆ ಪರವಾಗಿ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.