ಘನತ್ಯಾಜ್ಯ;ಬಾಹ್ಯ ಒತ್ತಡಗಳಿಗೆ ಮಣಿಯದೆ ವರದಿ ಸಲ್ಲಿಸಲು ಅಶೋಕ್ ಪತ್ರ

ಬೆಂಗಳೂರು: ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಯ ಟೆಂಡರ್‌ ಪರಿಶೀಲನೆಗೆ ಕಾಂಗ್ರೆಸ್‌ ಸರ್ಕಾರದಿಂದ ರಚಿಸಿದ ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪ್ರತಿಪಕ್ಷ ನಾಯಕ ಅಶೋಕ್ ಪತ್ರ ಬರೆದಿದ್ದಾರೆ.

ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಬೆಂಗಳೂರಿನ ಘನತ್ಯಾಜ್ಯ ನಿವರ್ಹಣೆಗೆ 39,437 ಕೋಟಿ ರೂ. ಮೊತ್ತದ ಟೆಂಡರ್‌ ರೂಪಿಸಿದೆ. ಇದರಲ್ಲಿ ಕಿಕ್‌ಬ್ಯಾಕ್‌ ಪಡೆದಿದ್ದು, ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ದೂರಿದ್ದರು.

ಈಗ ಟೆಂಡರ್‌ ಪರಿಶೀಲನೆಗೆಂದು ಸರ್ಕಾರದಿಂದ ಉನ್ನತ ಮಟ್ಟದ ಪರಿಶೀಲನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಉದ್ದೇಶಿಸಿ ಅವರು ಪತ್ರ ಬರೆದಿದ್ದಾರೆ.

ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ, ನೀವು ಈ ನಗರದ ನಾಗರಿಕರು. ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹಾಗಾಗಿ, ಇದು ಕೇವಲ ಒಂದು ಟೆಂಡರ್‌ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡರ್‌ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಯೋಜನೆಯ ವೆಚ್ಚ, ವಾರ್ಷಿಕ ದರ ಏರಿಕೆ, 30 ವರ್ಷಗಳ ಸುದೀರ್ಫ ಅವಧಿಯ ಒಪ್ಪಂದ ಹಾಗೂ ಏಕಸ್ವಾಮ್ಯಕ್ಕೆ ಅವಕಾಶ ಕಲ್ಪಿಸುವ ವೆಂಡರ್‌ ಲಾಕ್‌-ಇನ್‌ ಅಪಾಯಗಳ ಬಗ್ಗೆ ಸರ್ಕಾರದ ಸ್ವಂತ ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ. ಹಣಕಾಸು ಇಲಾಖೆಯ ಅಭಿಪ್ರಾಯದ ಪ್ರಕಾರ, ವರ್ಷಕ್ಕೆ ಶೇ.5 ರಷ್ಟು ದರ ಏರಿಕೆ ಮುಂದುವರಿದರೆ ಮುಂದಿನ 30 ವರ್ಷಗಳಲ್ಲಿ ಈ ಯೋಜನೆಯ ವೆಚ್ಚ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಅಂತಿಮ ಹೊರೆ ಬೀಳುವುದು ಸರ್ಕಾರದ ಮೇಲೆ ಅಲ್ಲ, ಬೆಂಗಳೂರಿನ ತೆರಿಗೆದಾರ ನಾಗರಿಕರ ಮೇಲೆ ಎಂದು ಅವರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರ ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ; ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ, ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿಗೆ ಅನುಗುಣವಾಗಿ, ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡ ವಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ವಿನಂತಿಸಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸುವುದು ತಮಗೆ ಒಂದು ಕರ್ತವ್ಯವಾಗಿರಬಹುದು. ಆದರೆ ಬೆಂಗಳೂರಿನ ಜನತೆಗೆ ಮತ್ತು ನಿಮ್ಮ ಆತ್ಮಸಾಕ್ಷಿಗೆ ಉತ್ತರ ನೀಡುವುದು ಅದಕ್ಕಿಂತ ದೊಡ್ಡ ಜವಾಬ್ದಾರಿಯಾಗಿದೆ.

ಬೆಂಗಳೂರಿನ ಹಿತಾಸಕ್ತಿಯನ್ನು ಕಾಪಾಡುವ ತಮ್ಮ ಗುರುತರ ಕರ್ತವ್ಯವನ್ನು ನಿಭಾಯಿಸಿದರು ಎಂಬ ಹೆಗ್ಗಳಿಕೆ ನಿಮಗೆ ಸಲ್ಲಲಿ ಎಂಬುದು ನನ್ನ ಆಶಯ. ಬೆಂಗಳೂರು ನಗರದ ಜನರ ಹಿತಾಸಕ್ತಿಯನ್ನು ಕಾಪಾಡುವ ಐತಿಹಾಸಿಕ ಅವಕಾಶ ಇಂದು ನಿಮ್ಮ ಮುಂದಿದೆ. ನಿಮ್ಮ ವರದಿ ಸರ್ಕಾರದ ನಿರ್ಧಾರವನ್ನು ಮಾತ್ರವಲ್ಲ, ಬೆಂಗಳೂರಿನ ಭವಿಷ್ಯವನ್ನೂ ರೂಪಿಸಲಿದೆ. ಆ ಜವಾಬ್ದಾರಿಯನ್ನು ನ್ಯಾಯಯುತವಾಗಿ ನಿರ್ವಹಿಸುವಿರಿ ಎಂಬ ದೃಢ ವಿಶ್ವಾಸ ನನ್ನದು ಎಂದು ಅಶೋಕ್ ಪತ್ರದಲ್ಲಿ ತಿಳಿಸಿದ್ದಾರೆ.