ನನಗೆ ರಾಜ್ಯವೇ ಪರ್ಮನೆಂಟ್-ಹೆಚ್ ಡಿ ಕೆ ಸ್ಪಷ್ಟ ನುಡಿ

ಮೈಸೂರು: ಕೇಂದ್ರದಲ್ಲಿ ಇರುವುದು ಟೆಂಪರರಿ, ನನಗೆ ರಾಜ್ಯವೇ ಪರ್ಮನೆಂಟ್
ಹೀಗೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯ ರಾಜಕಾರಣಕ್ಕೆ ಹೊಸದಾಗೇನೂ ನಾನು ಬರಬೇಕಾಗಿಲ್ಲ ಎಂದು ಹೇಳಿದರು.

ನಮ್ಮ ಶಾಸಕರ ನಿಷ್ಠೆಯ ಪರೀಕ್ಷೆಗಾಗಿಯೇ ನಾನು ಅಭ್ಯರ್ಥಿ ಹಾಕಿದೆ. ಪಕ್ಷದಲ್ಲಿರುವ ಹಿತ ಶತ್ರುಗಳು ಯಾರು ಎಂಬುದನ್ನು ನಾನು ಪತ್ತೆ ಮಾಡಬೇಕಿತ್ತು. ನನಗೆ ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಯಾರನ್ನು ಅತಿಯಾಗಿ ನಂಬಬಾರದು ಎಂಬ ಪಾಠವನ್ನು ಈ ಫಲಿತಾಂಶ ಕಲಿಸಿದೆ ಎಂದು ಮಾರ್ಮಿಕವಾಗಿ ನುಡಿದರು.

ಅಡ್ಡ ಮತದಾನ ನನಗೆ ಆಘಾತ ತಂದಿಲ್ಲ. ಇದರ ನಿರೀಕ್ಷೆ ಇತ್ತು, ಯರು ಅಡ್ಡ ಮತದಾನ ಮಾಡಿದ್ದಾರೆ ಎಂಬ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಯಾವ ಕಾರಣಕ್ಕೆ ಮಾಡಿದ್ದಾರೆ ಎಂಬುದೂ ಗೊತ್ತಿದೆ. ಪಕ್ಷ ಬಿಡುವ ಚರ್ಚೆಯ ಹಂತದವರೆಗೂ ಚರ್ಚಿಸಿ ಅಡ್ಡ ಮತದಾನ ಮಾಡಿದ್ದಾರೆ. ಹೋಗೋರೆಲ್ಲಾ ಹೋಗಲಿ. ನನಗೆ ಪಕ್ಷ ಕಟ್ಟುವುದು ಗೊತ್ತಿದೆ,ಯುವಕರನ್ನು (GEN Z) ಕರೆ ತಂದು ಪಕ್ಷ ಕಟ್ಟುತ್ತೇನೆ ಎಂದು ವಿಶ್ವಾಸದಿಂದ ತಿಳಿಸಿದರು.

ಜಿ.ಟಿ. ದೇವೇಗೌಡರ ಕುರಿತು ಮಾತನಾಡಿದ ಅವರು, ಜಿ.ಟಿ.ಡಿ ಹೆಸರನ್ನ ನನ್ನ ಮುಂದೆ ಪ್ರಸ್ತಾಪಿಸ ಬೇಡಿ. ಅದೆಲ್ಲಾ ಮುಗಿದು ಹೋದ ಕಥೆ. ಅವರು ಒಂದು ಕಾಲಲ್ಲ ಎರಡು ಕಾಲನ್ನು ಹೊರಗಡೆ ಇಟ್ಟಿದ್ದಾರೆ,ಈ ವಿಚಾರದಲ್ಲಿ ನಾನು ಬಹಳ ಕ್ಲಿಯರ್ ಇದ್ದೇನೆ ದೊಡ್ಡ ಗೌಡರು ಹೇಳಿದರೂ ಕೂಡ ಪಕ್ಷದ ಹಿತದೃಷ್ಟಿಯಿಂದ ಬದಲಾವಣೆ ಇರುವುದಿಲ್ಲ. ಈ ಬಾರಿಯ ಟಿಕೆಟ್ ಅಂತಿಮ ನಿರ್ಣಯ ಮಾಡುವುದು ನಾನೇ. ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ ವ್ಯಾಮೋಹ ಇರುವುದು ನಿಜ ಅದನ್ನ ಜಿ.ಟಿ.ಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಕಠಿಣವಾಗಿ ಹೇಳಿದರು.

ಬಿಡದಿ ಟೌನ್‌ಶಿಫ್ ಬಗ್ಗೆ ಕೇಳಿದ ಪ್ರಶ್ನೆಗೆ,ಈ ವಿಚಾರದಲ್ಲಿ ನನ್ನ ಹೋರಾಟ ನಿರಂತರ. ಕಾನೂನಾತ್ಮಕ ಹೋರಾಟ ಮಾಡುತ್ತೇನೆ ರೈತರ ಜೊತೆಯೂ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದ ಅವರು, ನಾನು ನನ್ನ ಅವಧಿಯಲ್ಲಿ ಐದು ಟೌನ್‌ಶಿಫ್ ಮಾಡಲು ನಿರ್ಧಾರ ಮಾಡಿದ್ದು ಸತ್ಯ. ಆದರೆ ಸ್ಥಳೀಯ ರೈತರ ವಿಚಾರ ತಿಳಿದ ಮೇಲೆ ನಾನು ಆ ಪ್ರಸ್ತಾಪ ಕೈ ಬಿಟ್ಟೆ ಎಂದು ಸ್ಪಷ್ಟಪಡಿಸಿದರು.