ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರೂ ಸಚಿವ ಸತೀಶ್ ಜಾರಕಿಹೊಳಿ ಬಾಮೈದುನನೂ ಆದ ವೈ.ಮಂಜುನಾಥ್ ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದೆ.
ಬೆಳ್ಳಂಬೆಳಗ್ಗೆ ಮಂಜುನಾಥ್ ಅವರ ನಿವಾಸಗಳು ಮತ್ತು ಸಂಬಂಧಪಟ್ಟ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ಅಂದರೆ ಸಹೋದರಿ ಮಹಾದೇವಿ ಅವರ ಪತಿ ವೈ. ಮಂಜುನಾಥ್.
ಮಂಜುನಾಥ್ ಮೇಲೆ ಅಕ್ರಮ ಆಸ್ತಿ ಗಳಿಕೆ ಹಾಗೂ ಹಣಕಾಸಿನ ವ್ಯವಹಾರಗಳ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಮೈಸೂರಿನ ಕುವೆಂಪು ನಗರದಲ್ಲಿರುವ ಮಂಜುನಾಥ್ ಅವರ ಮನೆ, ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ನಿವಾಸ ಸೇರಿದಂತೆ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ವಿಜಯನಗರದ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಮಂಜುನಾಥ್ ಅವರ ಎರಡು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಳ್ಳಾರಿ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರನೂ ಆದ ಮಂಜುನಾಥ್, ದೀರ್ಘಕಾಲದಿಂದ ಅಬಕಾರಿ ಇಲಾಖೆಯಲ್ಲಿ ಪ್ರಭಾವಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ಅವರು ಅಬಕಾರಿ ಇಲಾಖೆಯ ಡಿಸಿ ಆಗಿದ್ದಾಗ, 2012ರ ಜೂನ್ 27ರಂದು ಲೋಕಾಯುಕ್ತರು ದಾಳಿ ನಡೆಸಿದ್ದರು.
ಮಂಜುನಾಥ್ ಅವರು ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಕುಟುಂಬಸ್ಥರ ಹೆಸರಿನಲ್ಲಿ ಅಕ್ರಮವಾಗಿ ಬಾರ್‌ಗಳ ಮಾಲೀಕತ್ವ ಹೊಂದಿದ್ದಾರೆ ಎಂಬ ಆರೋಪವೂ ಇದೆ.
ಮೈಸೂರಿನ ದಟ್ಟಗಳ್ಳಿ ನಿವಾಸದಲ್ಲಿ ಮಂಜುನಾಥ್ ಅವರ ಆಪ್ತ ಸ್ನೇಹಿತೆ ಯಮುನಾ ಮತ್ತು ಆಕೆಯ ತಾಯಿ ವಾಸವಿದ್ದು,ಈ ಮನೆ ಮಂಜುನಾಥ್ ಅವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಜಾರಕಿಹೊಳಿ ಅವರ ಸಹೋದರಿ ಮಹಾದೇವಿ ಅವರ ಹೆಸರಿನಲ್ಲಿಯೂ ಬಾರ್ ಪರವಾನಗಿ ಪಡೆದಿರುವ ಬಗ್ಗೆ ತನಿಖೆ ನಡೆಯುತ್ತಿದೆ.ಬುಧವಾರ ಬೆಳಿಗ್ಗೆ ಗೋವಾ ಮತ್ತು ಬೆಂಗಳೂರಿನಿಂದ ಆಗಮಿಸಿದ ಇಡಿ ಅಧಿಕಾರಿಗಳು, ಅರೆಸೇನಾ ಪಡೆಯ ಬಿಗಿ ಭದ್ರತೆಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

