ನಶಾ ಮುಕ್ತ ಯುವ ಅಭಿಯಾನಕ್ಕೆ ಮೋದಿ ಚಾಲನೆ

ನವದೆಹಲಿ: ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಯುವಜನತೆ ಮಾದಕ ವ್ಯಸನದಿಂದ ದೂರವಿರುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ‘ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೋದಿ ಮಾತನಾಡಿದರು.

ಇದು ಕೇವಲ ಒಬ್ಬ ವ್ಯಕ್ತಿಗಷ್ಟೇ ಸಂಬಂಧಿಸಿಲ್ಲ, ಒಂದು ಕುಟುಂಬ, ಸಮಾಜ ಮತ್ತು ಇಡೀ ರಾಷ್ಟ್ರಕ್ಕಾಗಿ ನಡೆಯುತ್ತಿರುವ ಅಭಿಯಾನವಾಗಿದೆ ಎಂದು ಹೇಳಿದರು.

ಆರೋಗ್ಯವಂತ, ಆತ್ಮವಿಶ್ವಾಸದಿಂದ ಕೂಡಿದ ಹಾಗೂ ಮಾದಕ ವ್ಯಸನದಿಂದ ಮುಕ್ತವಾಗಿರುವ ಯುವಜನತೆ ವಿಕಸಿತ ಭಾರತದ ಕನಸನ್ನು ನನಸಾಗಿಸುತ್ತದೆ ಎಂದು ಹೇಳಿದರು.

ಮಾದಕ ವ್ಯಸನದ ವಿರುದ್ಧದ ಹೋರಾಟವನ್ನು ಒಬ್ಬ ವ್ಯಕ್ತಿ ಮಾತ್ರ ಗೆಲ್ಲಲು ಸಾಧ್ಯವಿಲ್ಲ. ಸಮಾಜ ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ದೊಡ್ಡ ಬದಲಾವಣೆ ಸಾಧ್ಯ. ಲಕ್ಷಾಂತರ ಯುವಕರು ಈಗಾಗಲೇ ಮಾದಕ ವಸ್ತುಗಳಿಂದ ದೂರವಿರುವ ಪ್ರತಿಜ್ಞೆ ಮಾಡಿದ್ದಾರೆ. ಮುಂದಿನ 100 ವಾರಗಳ ಕಾಲ ದೇಶಾದ್ಯಂತ ಈ ಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ಅಭಿಯಾನವನ್ನು ಮೊದಲು ಕಾಶಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಈಗ ಅದು ರಾಷ್ಟ್ರವ್ಯಾಪಿ ಚಳವಳಿಯಾಗಿ ಬೆಳೆಯುತ್ತಿದೆ. 125 ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳು, ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗಿಯಾಗಿವೆ ಎಂದು ಮಾಹಿತಿ ನೀಡಿದರು

ದೇಶದಾದ್ಯಂತ ಪ್ರತಿ ಭಾನುವಾರ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ. ಕ್ರೀಡಾಕೂಟ, ವಾಕಥಾನ್, ಧ್ಯಾನ, ಸಾಂಸ್ಕೃತಿಕ ಕಾರ್ಯಕ್ರಮ, ಬೀದಿ ನಾಟಕ, ಚರ್ಚೆಗಳು, ಚಿತ್ರಕಲೆ ಸ್ಪರ್ಧೆಗಳು ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಯುವಜನರಲ್ಲಿ ಮಾದಕ ವ್ಯಸನದ ವಿರುದ್ಧ ಅರಿವು ಮೂಡಿಸಲಾಗುತ್ತದೆ ತಿಳಿಸಿದರು.

ಪ್ರತಿ ಯುವಕನು ಮಾದಕ ವಸ್ತುಗಳಿಂದ ದೂರವಿದ್ದು, ತನ್ನ ಸುತ್ತಮುತ್ತಲಿನವರಿಗೂ ಜಾಗೃತಿ ಮೂಡಿಸಬೇಕು. ಒಗ್ಗಟ್ಟಿನ ಪ್ರಯತ್ನದಿಂದಲೇ ಮಾದಕ ವ್ಯಸನ ಮುಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಮೋದಿ ಹೇಳಿದರು.