ಶಾಲಾ-ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಡ್ಡಾಯ: ಎಎಸ್ಪಿ ಮಲ್ಲಿಕ್

ಮೈಸೂರು: ಶಾಲಾ-ಕಾಲೇಜುಗಳಲ್ಲಿ ವಾರಕ್ಕೊಮ್ಮೆ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ. ಮಲ್ಲಿಕ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಭಿವೃದ್ಧಿಪಡಿಸಿರುವ MANAS Portal – http://www.ncbmanas.gov.in ಟೋಲ್-ಫ್ರೀ ಸಂಖ್ಯೆ 1933 ಮತ್ತು ಇಮೇಲ್ info.ncbmanas@gov.in ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಾದಕ ವಸ್ತುಗಳ ಮಾರಾಟ ಅಥವಾ ಕಳ್ಳಸಾಗಾಣಿಕೆ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಈ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ಸೂಚಿಸಿದರು.

ಕಾಲೇಜು ಮತ್ತು ಪ್ರೌಢಶಾಲೆ ಆವರಣ ಹಾಗೂ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿಗಳ ಚಲನವಲನದ ಮೇಲೆ ನಿಗಾವಹಿಸಬೇಕು. ಸಾಮಾಜಿಕ ಜಾಲತಾಣ ಮತ್ತು ಜಾಗೃತಿ ಫಲಕಗಳ ಮೂಲಕ ಡ್ರಗ್ಸ್‌ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮಲ್ಲಿಕ್ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ-ವಿದ್ಯಾರ್ಥಿನಿಯರ ಹಾಸ್ಟೆಲ್ ಸುತ್ತಮುತ್ತ ಸಿಸಿಟಿವಿ ಅಳವಡಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು, ಫುಡ್ ಡೆಲಿವರಿ ಬಾಯ್ಸ್ ಮತ್ತು ಟೀ ಸರಬರಾಜುದಾರರ ವಾಹನ ಸಂಖ್ಯೆಗಳನ್ನು ಪರಿಶೀಲಿಸಬೇಕು. ಅನುಮಾನ ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.

ಆರೋಗ್ಯ ಮತ್ತು ಔಷಧ ಇಲಾಖೆ: ನಗರ ಮತ್ತು ಜಿಲ್ಲೆಯ ಮೆಡಿಕಲ್ ಸ್ಟೋರ್ ಹಾಗೂ ಫಾರ್ಮಸಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ನಿಷೇಧಿತ ಮಾತ್ರೆಗಳ ಮಾರಾಟ ಕಂಡುಬಂದರೆ ಪೊಲೀಸ್ ಇಲಾಖೆ ನೆರವಿನೊಂದಿಗೆ ದಾಳಿ ನಡೆಸಬೇಕು.

ಅರಣ್ಯ, ಕೃಷಿ ಮತ್ತು ಅಬಕಾರಿ:ಜಿಲ್ಲೆಯ ಕಾಡಂಚಿನ ಗ್ರಾಮಗಳು, ಹಾಡಿಗಳು ಮತ್ತು ಜಮೀನುಗಳಲ್ಲಿ ಅಕ್ರಮ ಗಾಂಜಾ ಬೆಳೆಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಬೇಕು.

ಜಿ.ಎಸ್.ಟಿ ಇಲಾಖೆ: ಸರಕು ಸಾಗಣೆ ವಾಹನಗಳನ್ನು ತಪಾಸಣೆ ಮಾಡುವಾಗ ಮಾದಕ ವಸ್ತುಗಳ ಸಾಗಣೆ ಆಗುತ್ತಿದೆಯೇ ಎಂದು ಪರಿಶೀಲಿಸಿ, ಅನುಮಾನವಿದ್ದರೆ ಪೊಲೀಸರಿಗೆ ವರದಿ ಮಾಡಬೇಕು.

ಪುನಶ್ಚೇತನ ಕೇಂದ್ರ ಮತ್ತು ಜೈಲುಗಳು: ಮಾದಕ ವ್ಯಸನಿಗಳಿಗೆ ಸಮಾಲೋಚನೆ ವೇಳೆ ಡ್ರಗ್ಸ್ ಸರಬರಾಜಿನ ಮೂಲ ಮತ್ತು ಪೆಡ್ಲರ್‌ಗಳ ವಿವರ ಪಡೆದು ಪೊಲೀಸರಿಗೆ ನೀಡಬೇಕು. ಕಾರಾಗೃಹಗಳಲ್ಲಿ ಬಂದಿಗಳು ವ್ಯಸನಿಗಳಾಗದಂತೆ ತಡೆ ಕ್ರಮ ಕೈಗೊಳ್ಳಬೇಕು ಎಂದು ಎಎಸ್ಪಿ ಸಿ.ಮಲ್ಲಿಕ್ ಆದೇಶಿಸಿದರು.

ಸಭೆಯಲ್ಲಿ ಹೆಚ್ಚುವರಿ ಎಸ್‌ಪಿ ನಾಗೇಶ್.ಎಲ್,ಜಿಲ್ಲಾ ಮಾನಸಿಕ ಆರೋಗ್ಯ ಅಧಿಕಾರಿ ಡಾ. ನಾಗೇಶ್ ಆರಾಧ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.