ದಸರಾ ಯಶಸ್ವಿಗೆ 17 ಉಪಸಮಿತಿಗಳ ರಚನೆ: ಡಾ. ಯತೀಂದ್ರ ಸಿದ್ಧರಾಮಯ್ಯ

ಮೈಸೂರು: ಮೈಸೂರು ದಸರಾ ಮಹೋತ್ಸವದ ಯಶಸ್ವಿ ಆಯೋಜನೆಗಾಗಿ 17 ಉಪಸಮಿತಿಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ‌ಉಸ್ತುವಾರಿ ಸಚಿವ
ಡಾ. ಯತೀಂದ್ರ ತಿಳಿಸಿದರು.

ಈ‌ ಎಲ್ಲಾ ಸಮಿತಿಗಳ ಜವಾಬ್ದಾರಿಯನ್ನು‌ ಅವುಗಳ ಕಾರ್ಯಾಧ್ಯಕ್ಷರಿಗೆ ವಹಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಸೋಮವಾರ ನಡೆದ ದಸರಾ ಕಾರ್ಯಕಾರಿ ಸಮಿತಿಯ ಸಭೆಯ ನಂತರ ಮಾಧ್ಯಮ ಗಳೊಂದಿಗೆ ಅವರು ಮಾತನಾಡಿದರು.

ಈ ಬಾರಿಯ ದಸರಾದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ‘ಕಂಬಳ’ವನ್ನು ಆಯೋಜಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಕಂಬಳ ಆಯೋಜನೆ ಖಚಿತವಾದರೆ ಅದಕ್ಕಾಗಿ 18ನೇ ಉಪಸಮಿತಿಯನ್ನು ರಚಿಸಲಾಗುವುದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ‘ಸೈಕ್ಲಿಂಗ್ ವೆಲೋಡ್ರೋಮ್’ ಪ್ರದೇಶವನ್ನು ಕಂಬಳಕ್ಕಾಗಿ ಪರಿಶೀಲಿಸಲಾಗಿದ್ದು, ಮುಖ್ಯಮಂತ್ರಿಗಳ ಅಂತಿಮ ಸೂಚನೆಯ ನಂತರ ನಿರ್ಧಾರ ವಾಗಲಿದೆ ಎಂದು ಸ್ಪಷ್ಟಪಡಿಸಿದರು.

ದಸರಾ ಉದ್ಘಾಟನೆಗೆ ಹಲವು ಗಣ್ಯರ ಹೆಸರುಗಳು ಶಾಸಕರಿಂದ ಬಂದಿವೆ. ಆದರೆ, ಅಂತಿಮವಾಗಿ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಮುಖ್ಯಮಂತ್ರಿಗಳೇ ತೀರ್ಮಾನಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು‌ ಉತ್ತರಿಸಿದರು.

ಈ ಬಾರಿ ಡ್ರೋನ್ ಶೋ ಮತ್ತಷ್ಟು ವಿನೂತನವಾಗಿ ಆಯೋಜಿಸಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಅನುಮತಿ ಸಿಕ್ಕರೆ ಏರ್ ಶೋ ಕೂಡ ನಡೆಸಲಾಗುವುದು ಎಂದು ತಿಳಿಸಿದರು.

ದಸರಾ ವೀಕ್ಷಣೆಯ ‘ಗೋಲ್ಡ್ ಪಾಸ್’ ಗೊಂದಲಗಳಿಗೆ ತೆರೆ ಎಳೆಯಲು, ಆಸನಗಳ ಸಂಖ್ಯೆಗೆ ತಕ್ಕಂತೆ ಪಾಸ್‌ಗಳನ್ನು ಮುದ್ರಿಸಿ, ಹಣ ನೀಡಿ ಖರೀದಿಸುವ ಸಾರ್ವಜನಿಕರಿಗೆ ಮಾತ್ರ ನೀಡಲಾಗುವುದು. ವಿಐಪಿಗಳಿಗೆ ಉಚಿತ ಗೋಲ್ಡ್ ಪಾಸ್ ನೀಡದಿರಲು ನಿರ್ಧರಿಸಲಾಗಿದೆ ಎಂದು ‌ಯತೀಂದ್ರ ತಿಳಿಸಿದರು.

ದಸರಾ ಮತ್ತು ಎಸ್‌ಐಆರ್ ಕೆಲಸಗಳಲ್ಲಿ ನಿರತರಾಗಿದ್ದರೂ, ದಿನನಿತ್ಯದ ಸಾರ್ವಜನಿಕ ಕೆಲಸ-ಕಾರ್ಯಗಳಿಗೆ ಯಾವುದೇ ರೀತಿಯ ಭಂಗ ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಡಾ.ಯತೀಂದ್ರ ತಿಳಿಸಿದರು.

ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ತನ್ಚೀರ್ ಸೇಠ್ ಅವರು ಮಾತನಾಡಿ ದಸರಾ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಆಗಮಿಸುವ ಹಿನ್ನಲೆಯಲ್ಲಿ ಹೋಟೆಲ್ ಗಳಲ್ಲಿ ಕೃತಕ ಬೇಡಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು, ನಗರದ 4 ಭಾಗದಲ್ಲಿ ಹೆಲ್ಪ್ ಡೆಸ್ಕ್ ತೆರೆದು ಆಗಮಿಸುವ ಜನರಿಗೆ ನಿಖರ ಮಾಹಿತಿ ನೀಡಿ, ಲೈಟಿಂಗ್ ವೀಕ್ಷಣೆ ಮಾಡಲು ದರ ನಿಗದಿ ಮಾಡಿ ವಿಶೇಷ ಟಾಂಗಾ ವ್ಯವಸ್ಥೆ ಮಾಡಬೇಕು, ಗೋಲ್ಡ್ ಪಾಸ್ ಕೊಳ್ಳುವವರಿಗೆ ಕಿರಿಕಿರಿಯಾಗದಂತೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಿದ್ಧತೆ ಈಗಿನಿಂದಲೇ ಪ್ರಾರಂಭ ವಾಗಬೇಕು ಎಂದು ಸಲಹೆ ನೀಡಿದರು.

ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾಧು ಅವರು ಮಾತನಾಡಿ ಬುಡಕಟ್ಟು ಜನರಿಗೆ ದಸರಾ ದೀಪಾಲಂಕಾರ, ಚಾಮುಂಡಿಬೆಟ್ಟ, ಪ್ಲವರ್ ಶೋ ವೀಕ್ಷಿಸಲು ಒಂದು ದಿನ ವಿಶೇಷ ಅವಕಾಶ ನೀಡಬೇಕು,ದಸರಾ ಸಂದರ್ಭದಲ್ಲಿ ಕಬಿನಿ ಉತ್ಸವ ಆಚರಿಸಬೇಕು ಎಂದು ಮನವಿ ಮಾಡಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಮಾತನಾಡಿ ಈ ಬಾರಿ ಮಳೆಯ ಅಭಾವವಿದೆ ಹಾಗಾಗಿ ವಿದ್ಯುತ್ ಖರೀದಿಸಬೇಕಿದೆ, ಡ್ರೋನ್ ಶೋಗೆ ಪ್ರಯೋಜಕತ್ವ ಒದಗಿಸಿಕೊಡಬೇಕು ಹಾಗೂ ದೀಪಾಲಂಕಾರ ಸಮಿತಿಗೆ ಹೆಚ್ಚಿನ ಅನುದಾನ ಒದಗಿಸಿಕೊಡಬೇಕು ಎಂದು ಕೋರಿದರು.

ಸಭೆಯಲ್ಲಿ ಶಾಸಕರಾದ ಕೆ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ಡಿ.ರವಿಶಂಕರ್, ಜಿ.ಡಿ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ. ವಿವೇಕನಂದ, ಸಿ.ಎನ್ ಮಂಜೇಗೌಡ, ಗ್ಯಾರಂಟಿ ಯೋಜನೆ ಉಪಾಧ್ಯಕ್ಷೆ ಡಾ: ಪುಷ್ಪ ಅಮರನಾಥ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ, ಜಿಪಂ ಸಿಇಒ ಯುಕೇಶ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಆಯುಕ್ತ ಅನುಚೇತ್, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.