ಮೈಸೂರು: ಮಾದಕ ವಸ್ತು ನಿರ್ಮೂಲನೆಗೆ ಕೇವಲ ಸರ್ಕಾರ ಮತ್ತು ಪೊಲೀಸರು ಮಾತ್ರ ಹೋರಾಟ ಮಾಡಿದರೆ ಸಾಲದು ಯುವಪೀಳಿಗೆ ಕೂಡಾ ಸಹಕರಿಸಬೇಕು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.
ಸೋಮವಾರ ಮೈಸೂರು ನಗರ ಪೊಲೀಸ್ ಮತ್ತು ಟೆರೇಷಿಯನ್ ಕಾಲೇಜು ಎನ್.ಎಸ್.ಎಸ್ ಘಟಕ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಡ್ರಗ್ಸ್ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಮಾಜದ ಭವಿಷ್ಯ ಇರುವುದು ಯುವ ಜನತೆಯಲ್ಲಿ, ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಗಿದ್ದರೆ ಮಾತ್ರ ನಮ್ಮ ದೇಶ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಕೇವಲ ನಗರ ಪ್ರದೇಶಗಳಲ್ಲದೆ, ಗ್ರಾಮೀಣ ಭಾಗದಲ್ಲಿಯೂ ಸಹ ಜನರು ಮಾದಕ ವ್ಯಸನಿಗಳಾಗುತ್ತಿದ್ದಾರೆ,ಇದನ್ನು ಹೋಗಲಾಡಿಸಲು ನಮ್ಮ ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಲವಾರು ಯೋಜನೆಗಳು ಹಾಗೂ ಕಠಿಣ ಕ್ರಮಗಳನ್ನು ಕೈಗೊಂಡಿವೆ, ಇಡೀ ರಾಜ್ಯವನ್ನು ಮಾದಕ ವ್ಯಸನ ಮುಕ್ತ ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ ಎಂದು ಸಚಿವರು ಸ್ಪಷ್ಟವಾಗಿ ಹೇಳಿದರು.
ಶಾಲೆ ಮತ್ತು ಕಾಲೇಜುಗಳಲ್ಲಿ ನಿಯಮಿತವಾಗಿ ‘ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ’ಗಳನ್ನು ನಡೆಸಬೇಕು. ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಬಗ್ಗೆ ಸಾರ್ವಜನಿಕರು ಉಚಿತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ವ್ಯಸನಕ್ಕೆ ತುತ್ತಾದವರನ್ನು ಅಪರಾಧಿಗಳಂತೆ ನೋಡದೆ, ಸೂಕ್ತ ಕೌನ್ಸೆಲಿಂಗ್ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರಿ ಮಟ್ಟದಲ್ಲಿ ಉಚಿತ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಡಾ.ಯತೀಂದ್ರ ಹೇಳಿದರು.
ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಆಲೋಚನೆ ಮಾಡುವಂತಹ ಸಂದರ್ಭ ಇದಾಗಿದೆ. ಇಂದಿನ ಯುವಜನತೆ ನಮ್ಮ ದೇಶದ ಆಸ್ತಿ. ಆದರೆ ನಮ್ಮ ಅನೇಕ ಯುವಕ-ಯುವತಿಯರು ಕ್ಷಣಮಾತ್ರದ ಸಂತೋಷಕ್ಕಾಗಿ ಮಾದಕ ದ್ರವ್ಯಗಳ ದಾಸರಾಗಿ ತಮ್ಮ ಸುಂದರ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.
ಮಾದಕ ವಸ್ತುಗಳ ಸೇವನೆಯಿಂದ ಖಿನ್ನತೆ, ಮಾನಸಿಕ ಅಸ್ವಸ್ಥತೆ ಮತ್ತು ಅಕಾಲಿಕ ಮರಣ ಸಂಭವಿಸಬಹುದು. ಒಬ್ಬ ವ್ಯಕ್ತಿ ವ್ಯಸನಿಯಾದರೆ, ಆತನ ಕುಟುಂಬ ದಿನವೂ ನರಕಯಾತನೆ ಅನುಭವಿಸುತ್ತದೆ, ಅಪರಾಧ ಕೃತ್ಯಗಳು ಹೆಚ್ಚಾಗುತ್ತವೆ. ಯುವಶಕ್ತಿ ಹಾದಿ ತಪ್ಪಿದಾಗ ಇಡೀ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ನಮ್ಮ ಬದುಕನ್ನು ನಾವೇ ಹಾಳುಮಾಡಿಕೊಂಡು ಸಮಾಜಕ್ಕೆ ಹೊರೆಯಾಗುವ ಬದಲು, ಮಾದಕ ವ್ಯಸನದಿಂದ ದೂರವಿದ್ದು, ಸಾಧನೆಯ ಮೂಲಕ ಸಮಾಜಕ್ಕೆ ದಾರಿದೀಪವಾಗೋಣ ಎಂದು ಕರೆ ನೀಡಿದರು.
ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮಾತನಾಡಿ, ಇಂದು ನಾವು RISE (ರೈಸ್) ಮತ್ತು ಬೇಡ ಬ್ರೋ ಎಂಬ ಜಾಗೃತಿ ಅಭಿಯಾನಗಳನ್ನು ಆರಂಭಿಸಿದ್ದೇವೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯು 2028 ರ ವೇಳೆಗೆ ‘ಮಾದಕ ವಸ್ತು ಮುಕ್ತ ಕರ್ನಾಟಕ’ ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಅದೇ ಹಾದಿಯಲ್ಲಿ ನಾವೂ ಸಹ ಕಳೆದ ಒಂದು ವರ್ಷದಿಂದ ನಮ್ಮ ಜಿಲ್ಲೆಯನ್ನು ಮಾದಕ ವಸ್ತು ಮುಕ್ತವಾಗಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ನಾವು ಮುಖ್ಯವಾಗಿ ಯುವಜನತೆಯನ್ನು (ವಿದ್ಯಾರ್ಥಿಗಳನ್ನು) ಗಮನದಲ್ಲಿಟ್ಟುಕೊಂಡಿದ್ದೇವೆ. , ಕೇವಲ ಕುತೂಹಲಕ್ಕಾಗಿ ‘ಒಮ್ಮೆ ಮಾದಕ ವಸ್ತು ಸೇವನೆಗೆ ಯತ್ನಿಸಿ ನೋಡೋಣ’ ಎಂಬ ಮನಸ್ಥಿತಿಯಿಂದ ಆರಂಭವಾಗುವ ಈ ಅಭ್ಯಾಸ, ಕಾಲಕ್ರಮೇಣ ವ್ಯಕ್ತಿಯನ್ನು ಸಂಪೂರ್ಣವಾಗಿ ಅದಕ್ಕೆ ದಾಸನನ್ನಾಗಿ ಮಾಡುತ್ತದೆ ಈ ಬಗ್ಗೆ ಅತೀ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಈ ದುರಂತವನ್ನು ತಡೆಯಲು ನಾವು ಪ್ರತಿಯೊಂದು ಕಾಲೇಜನ್ನು ಗುರುತಿಸಿ, ಅಲ್ಲಿ ಕಡ್ಡಾಯವಾಗಿ ‘ಆಂಟಿ-ಡ್ರಗ್ ಕಮಿಟಿ’ ಇರಲೇಬೇಕು ಎಂದು ನಿಯಮಿಸಿ, ಸಮಿತಿಗಳನ್ನು ಯಶಸ್ವಿಯಾಗಿ ಸ್ಥಾಪಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ.ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಕಾನೂನು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಡಾ. ಹರ್ಷ ಪ್ರಿಯಂವದಾ, ಅಪರಾಧ ಮತ್ತು ಸಂಚಾರದ ಉಪ ಪೊಲೀಸ್ ಆಯುಕ್ತ ಕೆ.ಎಸ್ ಸುಂದರ್ ರಾಜ್, ಟೆರಿಷಿಯನ್ ಕಾಲೇಜಿನ ನಿರ್ದೇಶಕರಾದ ರೆವೆರೆಂಡ್ ಡಾ. ಸಿಸ್ಟರ್ ಪ್ರಪುಲ್ಲಾ ಹಾಗೂ ಟೆರಿಷಿಯನ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ರೆವೆರೆಂಡ್ ಸಿಸ್ಟರ್ ಅಂಜಲಿ ಅವರು ಉಪಸ್ಥಿತರಿದ್ದರು.

