ವಿವಾಹಿತ ಮಹಿಳೆ ಕಿರುಕುಳ; ಯುವಕ ಆತ್ಮಹತ್ಯೆ-ಮನೆಯವರ ಆರೋಪ

ಮಂಡ್ಯ: ವಿವಾಹಿತ ಮಹಿಳೆಯ ಕಿರುಕುಳದಿಂದ ಮನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಗಂಜೀಗರೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗಂಜೀಗರೆ ಕೊಪ್ಪಲು ಗ್ರಾಮದ ಹರೀಶ್ (24)ಆತ್ಮಹತ್ಯೆ ಮಾಡಿಕೊಂಡ ಯುವಕ. ಮಹಿಳೆಯ ಕಿರುಕುಳದಿಂದಲೇ ನೇಣಿಗೆ ಶರಣಾಗಿದ್ದಾನೆ ಎಂದು ಯುವಕನ ಕುಟುಂಬ ದವರು ಆರೋಪಿಸಿದ್ದಾರೆ.

ಅದೇ ಗ್ರಾಮದ ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆ ದೀಪಿಕಾ ಮೇಲೆ ಮೃತ ಹರೀಶ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ನಾಲ್ಕು ವರ್ಷದಿಂದ ಹರೀಶ್ ಮತ್ತು ದೀಪಿಕಾ ನಡುವೆ ಪರಿಚಯವಿತ್ತು. ಈ ವೇಳೆ ಹರೀಶ್ ಬಳಿ 5 ಲಕ್ಷ ರೂಪಾಯಿ ಸಾಲ ಪಡೆದಿದ್ದ ದೀಪಿಕಾ, ಹರೀಶ್ ಹಣ ವಾಪಸ್ ಕೇಳಿದಾಗ ರೇಪ್ ಕೇಸ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಳು ಎಂಬುದಾಗಿ ಯುವಕನ ಮನೆಯವರು ಆರೋಪಿಸಿದ್ದಾರೆ.

ಇದರಿಂದ ಆತಂಕಗೊಂಡ ಹರೀಶ್ ತಮ್ಮ ಜಮೀನಿನಲ್ಲಿರುವ ಮಿಷನ್ ಮನೆಯಲ್ಲಿ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ದೂರಿದ್ದಾರೆ.

ಹರೀಶ್ ಸಾವಿಗೆ ದೀಪಿಕಾ ಕಿರುಕುಳ ಕಾರಣ,ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆತನ ಕುಟುಂಬಸ್ಥರು ದೂರು ನೀಡಿ ಒತ್ತಾಯಿಸಿದ್ದಾರೆ.

ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದು,ಸತ್ಯ ಹೊರಬರಬೇಕಿದೆ.