ಬೆಂಗಳೂರು: ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ ಇಲ್ಲದ ಅಕ್ರಮ ಬಂದೂಕು, ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಸಿದರು.
ಬೆಂಗಳೂರಿನ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಸಿಎಂ ಮಾತನಾಡಿದರು.
ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ ಎಂದು ಸಂದೇಶ ನೀಡಿದರು.
ಈ ಹಿಂದೆ ರಾಮಮೂರ್ತಿ ಎನ್ನುವ ಹಿರಿಯ ಅಧಿಕಾರಿ ಅನೇಕರು ಅಕ್ರಮ ನಾಡ ಬಂದೂಕುಗಳನ್ನು ಹೊಂದಿರುವ ಬಗ್ಗೆ ಹೇಳಿದ್ದರು. ಆಗ ನಾನು ನನ್ನ ಕ್ಷೇತ್ರದಲ್ಲಿ 300 ಕ್ಕೂ ಹೆಚ್ಚು ಬಂದೂಕುಗಳನ್ನು ಜನರಿಂದ ಸರ್ಕಾರಕ್ಕೆ ಒಪ್ಪಿಸಿದ್ದೆ. ಇನ್ನೂ ಹೆಚ್ಚಿನ ನಾಡ ಬಂದೂಕುಗಳು ಇರುವ ಬಗ್ಗೆ ಸರ್ಕಾರಕ್ಕೆ ಮಾಹಿತಿಯಿದೆ” ಎಂದರು.
ದೇಶದ ಅರಣ್ಯ ಸಂಪತ್ತನ್ನು ಕಾಪಾಡುವವರು ನೀವು. ವನ್ಯಜೀವಿಗಳ ಜೊತೆ ಸಂಘರ್ಷ ಏರ್ಪಟ್ಟು ಅನೇಕ ಸಿಬ್ಬಂದಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಗಳ ಭತ್ಯೆ ವಿಚಾರವಾಗಿ ಸಚಿವರ ಮನವಿಯ ಬಗ್ಗೆ ಆಲೋಚಿಸಲಾಗುವುದು. ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಒಟ್ಟಾಗಿ ತೀರ್ಮಾನ ಮಾಡಲಾಗುವುದು ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.
ಅರಣ್ಯಕ್ಕೂ ನನಗೂ ಬಹಳ ಹತ್ತಿರದ ಸಂಬಂಧ ಇದೆ, ನನ್ನ ಊರು, ಮನೆ, ಕ್ಷೇತ್ರ ಬದುಕು ಎಲ್ಲವೂ ಅರಣ್ಯಕ್ಕೆ ಹೊಂದಿಕೊಂಡೇ ಇದೆ. ಅರ್ಕಾವತಿಯಲ್ಲಿ ಮಹಶೀರ್ ಮೀನುಗಳಿದ್ದವು ನಾನೂ ಸಹ ಮೀನಿಗೆ ಗಾಳ ಹಾಕಿ ಕುಳಿತುಕೊಳ್ಳುತ್ತಿದ್ದೆ ಎಂದು ಡಿಕೆಶಿ ಸ್ಮರಿಸಿದರು.
ಜನ ಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನೆನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಬಗೆಹರಿಸೋಣ. ಜನರ ಮೇಲೆ ಒತ್ತಡ ಹೇರಬೇಡಿ. ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲವೊಂದು ವಿಚಾರದಲ್ಲಿ ಅತಿಯಾಗಿ ವರ್ತಿಸುತ್ತೀರಿ. ಅಭಿವೃದ್ಧಿ ಕೆಲಸಗಳಿಗೆ ಅಡ್ಡ ಬರಬಾರದು. ಕೆಲ ವಿನಾಯಿತಿಗಳನ್ನೂ ನೀಡಬೇಕು ಎಂದು ಸಲಹೆ ನೀಡಿದರು.
ತೇಗದ ಸಿರಿ ಯೋಜನೆ ಯಶಸ್ಸಿಗೆ ಅರಣ್ಯ ಅಧಿಕಾರಿಗಳು ಕೆಲಸ ಮಾಡಬೇಕು. ರೈತರಿಗೆ ಇದರಿಂದ ಹೆಚ್ಚಿನ ಲಾಭವಾಗುತ್ತದೆ ಎಂದು ತಿಳಿಹೇಳಿದರು.
ನಗರದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಟ್ರೀ ಪಾರ್ಕ್ ಗಳನ್ನು ನಿರ್ಮಾಣ ಮಾಡಿ ನಗರದ ಶ್ವಾಸಕೋಶವನ್ನು ಹಿಗ್ಗಿಸುವ ಕೆಲಸ ಮಾಡಲಾಗುವುದು. ಶಾಲಾ ಮಕ್ಕಳಿಂದ ಗಿಡ ನೆಡುವ ಕೆಲಸ ಮಾಡಿಸಲಾಗಿತ್ತು. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಪಾಲಿಕೆಗಳು ಹೆಚ್ಚಿನ ಗಮನ ಹರಿಸುವಂತೆ ಹೇಳಿದ್ದೇನೆ ಎಂದು ಸಿಎಂ ತಿಳಿಸಿದರು.
ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ,ಕಸ್ತೂರಿ ರಂಗನ್ ವರದಿ ವಿಚಾರವಾಗಿ ಚರ್ಚೆ ನಡೆಸಲು ಸೆಪ್ಟೆಂಬರ್ 21 ರಿಂದ 23 ರ ವರೆಗೆ ಮೂರು ದಿನಗಳ ವಿಧಾನಮಂಡಲ ಅಧಿವೇಶನ ಕರೆಯಲಾಗಿದ್ದು, ರೈತರ ಹಿತದೃಷ್ಟಿಯಿಂದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿವೇಶನದಲ್ಲಿ ಎಲ್ಲ ಶಾಸಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಮುಕ್ತವಾಗಿ ನೀಡಬೇಕು. ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು ಮುಖ್ಯಮಂತ್ರಿಯವರ ಎಪಿಎಂಸಿ ಭೇಟಿ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮದವರು ಸಿಎಂ ಗಮನ ಸೆಳೆದಾಗ, ನಮ್ಮ ಕೆಲಸವನ್ನು ಗುರುತಿಸಿದ ಹೈಕೋರ್ಟ್ ಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಬಾಲ ಕಾರ್ಮಿಕರ ರಕ್ಷಣೆ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಬಗ್ಗೆ ಕೇಳಿದಾಗ, ಬಾಲಕಾರ್ಮಿಕರ ರಕ್ಷಣೆ ವಿಚಾರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ದುರದೃಷ್ಟಕರ. ಮಕ್ಕಳನ್ನು ರಕ್ಷಿಸುವುದು ಕಾರ್ಮಿಕ ಇಲಾಖೆ ಮಾತ್ರವಲ್ಲ, ಪೊಲೀಸ್ ಇಲಾಖೆಯ ಜವಾಬ್ದಾರಿಯೂ ಹೌದು. ಬಾಲಕಾರ್ಮಿಕರನ್ನು ರಕ್ಷಿಸುವ ಕಾರ್ಯದಲ್ಲಿ ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಡಿ.ಕೆ.ಶಿವಕುಮಾರ್ ಕಡಕ್ಕಾಗಿ ಹೇಳಿದರು.
ವಂದೇ ಮಾತರಂ ಹಾಡಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ವಂದೇ ಮಾತರಂ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಬಹಳ ಹಿಂದಿನಿಂದಲೂ ಸ್ಪಷ್ಟವಾಗಿದೆ. ವಂದೇ ಮಾತರಂ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಕಾಂಗ್ರೆಸ್ ಗೌರವ ನೀಡುತ್ತದೆ ಎಂದು ಹೇಳಿದರು.

