ಬೆಂಗಳೂರು/ಬೆಳಗಾವಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಳ್ಳಂಬೆಳಿಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವೈ. ಮಂಜುನಾಥ್ ಅವರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಕೆಲವೇ ವಾರಗಳಷ್ಟೆ ಆಗಿದೆ. ಇದೀಗ ಸಚಿವ ಸತೀಶ್ ಜಾರಕಿಹೊಳಿಗೆ ಸಂಬಂಧಿಸಿದ ಸುಮಾರು 18 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ಬುಧವಾರ ಬೆಳಗ್ಗೇನೆ ಶೋಧ ನಡೆಸಿ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸ, ಸರ್ಕಾರಿ ವಸತಿ ಗೃಹಗಳು ಹಾಗೂ ಬೆಳಗಾವಿ ಮತ್ತು ಗೋಕಾಕ್‌ನಲ್ಲಿರುವ ಆಸ್ತಿಗಳ ಮೇಲೂ ಶೋಧ ನಡೆಸಲಾಗಿದೆ. ಬಾರ್ ಲೈಸೆನ್ಸ್‌ಗಳ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಮುಂಜಾನೆಯಿಂದ ಆರಂಭವಾದ ಶೋಧ ಕಾರ್ಯಾಚರಣೆ ವೇಳೆ ಸಚಿವ ಸತೀಶ್ ಪುತ್ರಿ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಇತರ ಸ್ಥಳಗಳಲ್ಲೂ ನಡೆಸಲಾಗಿದೆ.ಅಲ್ಲದೆ
ಮಹಾರಾಷ್ಟ್ರದಲ್ಲಿರುವ ಕೆಲವು ಸ್ಥಳಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಸತೀಶ್ ಜಾರಕಿಹೊಳಿ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ಬಾರ್ ಲೈಸೆನ್ಸ್‌ಗಳನ್ನು ಕೊಡಿಸಲು ನೆರವಾಗಿದ್ದಾರೆಯೇ ಮತ್ತು ಅಕ್ರಮಗಳಿಂದ ಬಂದಿದೆ ಎನ್ನಲಾದ ಹಣವನ್ನು ಬಳಿಕ ವಿದೇಶಕ್ಕೆ ವರ್ಗಾಯಿಸಲಾಗಿದೆಯೇ ಅಥವಾ ವಿದೇಶದಲ್ಲಿ ಹೂಡಿಕೆ ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ.
ಇಂದು ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ನಡೆದ ದಾಳಿಗೂ ಕೆಲ ವಾರಗಳ ಹಿಂದೆ ಮಂಜುನಾಥ್ ಅವರ ನಿವಾಸದ ಮೇಲೆ ನಡೆದ ದಾಳಿಗೂ ಸಂಬಂಧವಿಲ್ಲ, ಇಂದಿನ ದಾಳಿಗೆ ಸಚಿವ ಸತೀಶ್ ಜಾರಕಿಹೊಳಿಯವರ ಅಕ್ರಮ ಹಣ ವರ್ಗಾವಣೆ ಕೇಸು ಕಾರಣ ಎಂದು ಇಡಿ ಸ್ಪಷ್ಟಪಡಿಸಿದೆ.

