‌ಬಿಮ್ಸ್ ನಲ್ಲಿ ಕಂದಮ್ಮಗಳು ಸಾಯುತ್ತಿದ್ದರೆ, ಸರ್ಕಾರ ಕಮಿಷನ್ ದಂಧೆ ನಡೆಸುತ್ತಿದೆ -ಅಶೋಕ

ಬೆಂಗಳೂರು: ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಬಿಮ್ಸ್) ತಿಂಗಳಿಗೆ 20 ನವಜಾತ ಶಿಶುಗಳು ಸಾಲಾಗಿ ಸಾಯುತ್ತಿರುವುದು ಇಡೀ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರೇ ಕಳವಳ ವ್ಯಕ್ತಪಡಿಸಿ, ಇಷ್ಟೊಂದು ಸಾವಿನ ಹಿಂದಿನ ವ್ಯವಸ್ಥೆಯ ದೋಷಗಳನ್ನು ಪ್ರಶ್ನಿಸುತ್ತಿದ್ದರೆ, ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಜಾಣ ಕುರುಡುತನ ಪ್ರದರ್ಶನ ಮಾಡುತಿದ್ದಾರೆ ಎಂದು ಅಶೋಕ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಕಿತ್ತೂರು ಕರ್ನಾಟಕ ಭಾಗದ ಬಡ ಜನರ ಜೀವನಾಡಿಯಾಗಬೇಕಿದ್ದ ಈ ಸರ್ಕಾರಿ ಆಸ್ಪತ್ರೆ, ಇಂದು ಹಸುಗೂಸುಗಳ ಪಾಲಿಗೆ ಮರಣ ಶಾಸನ ಬರೆಸುವ ತಾಣವಾಗಿ ಬದಲಾಗಿದೆ ಎಂದು ಹೇಳಿರುವ ಅಶೋಕ್ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕಿದ್ದಾರೆ.

ಇನ್ಫೆಕ್ಷನ್ ಮತ್ತು ಐಸಿಯು ಕೊರತೆಗೆ ಯಾರು ಹೊಣೆ?,
ಬಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್, ಹಾಸಿಗೆಗಳು, ಸೋಂಕು ನಿಯಂತ್ರಣ ಕ್ರಮಗಳು ಹಾಗೂ ತುರ್ತು ನಿಗಾ ಘಟಕ ಸರಿ ಇಲ್ಲದೆ ಶಿಶುಗಳು ಬಲಿಯಾಗುತ್ತಿವೆಯೇ? ಈ ನಿರ್ಲಕ್ಷ್ಯಕ್ಕೆ ಸಚಿವರು ಹೊಣೆ ಯಾರು?
ರಾಜಕೀಯದಲ್ಲೇ ಮುಳುಗಿದ್ದೀರಾ?,
ಬಡ ತಾಯಂದಿರು ಹೆತ್ತ ಕಂದಮ್ಮಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದರೆ, ನಿಮ್ಮ ಸರ್ಕಾರ ಮಾತ್ರ ಕಮಿಷನ್ ದಂಧೆ ಮತ್ತು ಕುರ್ಚಿ ಕಾಪಾಡಿಕೊಳ್ಳುವ ರಾಜಕೀಯದಲ್ಲೇ ಮುಳುಗಿದೆ.
ಜಿಲ್ಲೆಯಲ್ಲಿ ಗಂಡು-ಹೆಣ್ಣು ಮಕ್ಕಳ ಜನನ ಪ್ರಮಾಣದಲ್ಲಿ ಶೇ. 60-40 ಅಂತರವಿದ್ದು, ಅಕ್ರಮ ಹೆಣ್ಣು ಭ್ರೂಣ ಹತ್ಯೆ ದಂಧೆ ನಡೆಯುತ್ತಿದೆಯೇ ಎಂಬ ಆತಂಕ ಹುಟ್ಟಿದೆ. ಆಸ್ಪತ್ರೆಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?

ರಾಜ್ಯದ ಬೊಕ್ಕಸ ಬರಿದು ಮಾಡಿ ಸರ್ಕಾರಿ ಆಸ್ಪತ್ರೆಗಳಿಗೆ ಸರಿಯಾದ ಔಷಧ, ಉಪಕರಣ, ಮೂಲಸೌಕರ್ಯ ಒದಗಿಸದೆ ಬಡವರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದೀರಾ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.

ಕೂಡಲೇ ಬಿಮ್ಸ್ ಆಸ್ಪತ್ರೆಯ ಶಿಶು ಸಾವುಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಅಗತ್ಯ ವೈದ್ಯಕೀಯ ಮೂಲಸೌಕರ್ಯಗಳನ್ನು ಯುದ್ಧೋಪಾದಿಯಲ್ಲಿ ಕಲ್ಪಿಸಿ, ಕಂದಮ್ಮಗಳ ಪ್ರಾಣ ಕಾಪಾಡಲು ಆಗದಿದ್ದರೆ ತಕ್ಷಣವೇ ವೈದ್ಯಕೀಯ ಶಿಕ್ಷಣ ಸಚಿವರು ರಾಜೀನಾಮೆ ನೀಡಿ ಮನೆಗೆ ನಡೆಯಲಿ ಎಂದು ಅಶೋಕ ಒತ್ರಾಯಿಸಿದ್ದಾರೆ.