ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಒಪ್ಪಿಗೆ: ದರ್ಶನ್‌ಗೆ ಭಾರೀ ಹಿನ್ನಡೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್‌ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು 59ನೇ ಸಿಸಿಹೆಚ್‌ ನ್ಯಾಯಾಲಯ ಅನುಮತಿ ನೀಡಿದ್ದು ಆರೋಪಿ ದರ್ಶನ್ ಗೆ‌ ಭಾರೀ ಹಿನ್ನಡೆಯಾಗಿದೆ.

ಇಂದು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್, ಪ್ರದೋಷ್ ಮಾಫಿ ಸಾಕ್ಷಿಗೆ ಇತರ ಆರೋಪಿಗಳು ಆಕ್ಷೇಪಿಸುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.

ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಸ್ವೀಕರಿಸುವಂತೆ ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದ್ದರು.

ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಅವರು ಮಾಫಿ ಅರ್ಜಿಯನ್ನು ಸ್ವೀಕರಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಲಯವೇ ಪ್ರದೋಷ್‌ ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿದೆ.

ಕೋರ್ಟ್ ಮಾಫಿ ಅರ್ಜಿಯನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಲಿರುವುದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮುಂದೆ ಹೊಸ ಬೆಳವಣಿಗೆಗಳಾಗಬಹುದು.