ರೇಣುಕಾಸ್ವಾಮಿ ಕೊಲೆ ಕೇಸ್: ಸಾಕ್ಷಿಗೆ ಬೆದರಿಕೆ ಹಿಂದೆ ಪ್ರಭಾವಿ ಮಹಿಳೆ!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸ್ಫೋಟಕ ಸತ್ಯಗಳು ಹೊರ ಬರುತ್ತಿವೆ.

ಪ್ರಕರಣದ 49ನೇ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ ಕೃತ್ಯದ ಹಿಂದೆ ಪ್ರಭಾವಿ ಮಹಿಳೆಯ ಪ್ರಭಾವ ಇರುವುದು ಮತ್ತು ಮಾಸ್ಟರ್ ಪ್ಲಾನ್ ನಡೆದಿರುವುದು ತಾಂತ್ರಿಕ ತನಿಖೆಯಲ್ಲಿ ದೃಢಪಟ್ಟಿದೆ.

ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಹಾಗೂ ನಟ ದರ್ಶನ್‌ ಕುಟುಂಬಕ್ಕೆ ಆಪ್ತನಾಗಿದ್ದ ಪುನೀತ್ ಎಂಬಾತನ ಮೂಲಕ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿಸಲಾಗಿತ್ತು.

ಅಪಹರಣ ಮತ್ತು ಬೆದರಿಕೆ ಕೃತ್ಯ ನಡೆಯುತ್ತಿದ್ದ ಸಮಯದಲ್ಲಿ ಪುನೀತ್, ಕಿರಣ್ ಹಾಗೂ ಗೌರವ್ ಶೆಟ್ಟಿ ಮೂವರೂ ವಾಟ್ಸಪ್ ಕಾನ್ಫರೆನ್ಸ್ ಕಾಲ್‌ನಲ್ಲಿದ್ದರು. ಕಾಲ್‌ನಲ್ಲಿದ್ದುಕೊಂಡೇ ಕಿರಣ್ ಮತ್ತು ಗೌರವ್ ಶೆಟ್ಟಿ, ಸಾಕ್ಷಿಯನ್ನು ಹೇಗೆ ಹೆದರಿಸಬೇಕು ಎಂಬುದರ ಕುರಿತು ಪುನೀತ್ ಆಂಡ್ ಟೀಮ್‌ಗೆ ಸಲಹೆ ನೀಡುತ್ತಿದ್ದರು.

ಎಫ್‌ಎಸ್‌ಎಲ್ ವರದಿಯ ಪ್ರಕಾರ, ಈ ಕೃತ್ಯ ನಡೆಯುವ ಮುನ್ನ ಪುನೀತ್‌ಗೆ ಪ್ರಭಾವಿ ಮಹಿಳೆಯೊಬ್ಬರಿಂದ ಕರೆ ಬಂದಿತ್ತು.ಗೌರವ್ ಶೆಟ್ಟಿ ಏನು ಹೇಳುತ್ತಾನೋ ಅದನ್ನು ಚಾಚೂ ತಪ್ಪದೇ ಮಾಡು ಎಂದು ಆ ಪ್ರಭಾವಿ ಮಹಿಳೆ ಪುನೀತ್‌ಗೆ ಸೂಚನೆ ನೀಡಿದ್ದಳು ಎಂಬುದು ವರದಿಯಲ್ಲಿ ಗೊತ್ತಾಗಿದೆ.

ಸಾಕ್ಷಿಗೆ ಬೆದರಿಕೆ ಹಾಕಿದ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ಪುನೀತ್, ಸುಹಾಸ್ ಹಾಗೂ ವೇಣು ಎಂಬ ಮೂವರನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ನೇರ ಕೈವಾಡವಿರುವ ಗೌರವ್ ಶೆಟ್ಟಿ ಹಾಗೂ ಕಿರಣ್‌ಗೆ ಸದ್ಯದಲ್ಲೇ ಸಮನ್ಸ್ ನೀಡಿ ವಿಚಾರಣೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತೊಂದು ಪ್ರಮುಖ ತಾಂತ್ರಿಕ ವರದಿ ಬರಬೇಕಿದ್ದು, ಅದು ಕೈಸೇರಿದ ತಕ್ಷಣವೇ ಪ್ರಭಾವಿ ಮಹಿಳೆ ಯಾರು ಎಂಬುದು ಸೇರಿದಂತೆ ಮತ್ತಷ್ಟು ಸ್ಫೋಟಕ ವಿಚಾರಗಳು ಅಧಿಕೃತವಾಗಿಯೇ ಹೊರಬೀಳಲಿವೆ.

ತುಮಕೂರಿನ ರಂಗಾಪುರ ನಿವಾಸಿ ಸಂದೀಪ್ ಚಿತ್ರದುರ್ಗದ ದುರ್ಗಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕ್ಯಾಷಿಯರ್. ರೇಣುಕಾಸ್ವಾಮಿ ಹಾಗೂ ಆತನನ್ನು ಅಪಹರಿಸಿದ್ದ ಆರೋಪಿಗಳು ಇದೇ ಬಾರ್‌ನಲ್ಲಿ ಊಟ ಮಾಡಿದ್ದರಿಂದ, ಸಂದೀಪ್ ಈ ಪ್ರಕರಣ ಕಣ್ಣಾರೆ ಕಂಡ ಪ್ರಮುಖ ಸಾಕ್ಷಿಯಾಗಿದ್ದಾರೆ.

ಜುಲೈ ಮೊದಲ ವಾರ ಕೋರ್ಟ್‌ನಲ್ಲಿ ನಡೆದ ವಿಚಾರಣೆ ಸಮಯದಲ್ಲಿ ಸಂದೀಪ್‌ ನಮಗೆ ಪರಿಚಯವಿರುವ ವ್ಯಕ್ತಿ ಮೂಲಕ ಕೆಲ ವ್ಯಕ್ತಿಗಳು ನನ್ನನ್ನು ಮಾತನಾಡಿಸಿದ್ದಾರೆ. ತಾವು ಹೇಳಿದಂತೆ ಸಾಕ್ಷ್ಯ ನುಡಿಯುವಂತೆ ನನಗೆ ಸೂಚಿಸಿದ್ದರು ಎಂಬುದಾಗಿ ಹೇಳಿದ್ದರು.

ಈ ಪ್ರಕರಣದಲ್ಲಿ ನನಗೆ ಅಪರಿಚಿತರಿಂದ ಒತ್ತಡದ ಕರೆ ಬಂದಿದ್ದು, ನ್ಯಾಯಾಲಯದಲ್ಲಿ ಹೇಳಿಕೆಯನ್ನು ತಿರುಚಿ ನೀಡಬೇಕು ಎಂದು ತಾಕೀತು ಮಾಡಿದ್ದರು ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕವನ್ನು ಸೆಷನ್ಸ್ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಬೆದರಿಕೆ ಬಂದ ಬೆನ್ನಲ್ಲೇ ಪೊಲೀಸರು ಕರೆ ವಿವರವನ್ನು ಪತ್ತೆ ಹಚ್ಚಲು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು.

ಹಾಗಾಗಿ ವರದಿ‌ ಬರುತ್ತಿದ್ದು ಸ್ಪೋಟಕಗಳು ಜಗತ್ತಿಗೆ ತಿಳಿಯುವಂತಾಗುತ್ತಿದೆ.