ಮೈಸೂರು: ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟಬಲ್ ಟ್ರಸ್ಟ್ ನೂತನ ಕಚೇರಿಯು ಕೇವಲ ಒಂದು ಸಂಘಟನೆಯಾಗಿ ಉಳಿಯದೆ ಶಿಕ್ಷಣ, ಸಾಮಾಜಿಕ ನ್ಯಾಯ, ಯುವಜನರ ಸಬಲೀಕರಣ ಹಾಗೂ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪರಿಣಾಮಕಾರಿ ವೇದಿಕೆಯಾಗಿ ಕಾರ್ಯಾನಿರ್ವಹಿಸಲಿ ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ಹಾರಿಸಿದರು.
ಮೈಸೂರಿನ ಶಾರದಾದೇವಿ ನಗರದ ವಾಸು ಬಡಾವನಣೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟಬಲ್ ಟ್ರಸ್ಟ್ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು,ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಒದಗಿಸುವ ಜೊತೆಗೆ, ಸಮುದಾಯದ ಹಕ್ಕುಗಳ ಕುರಿತು ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಚಾರಿಟಬಲ್ ಟ್ರಸ್ಟ್‌ನ ಸೇವೆ ಹಾಗೂ ಸೌಲಭ್ಯಗಳು ತಲುಪುವಂತಾಗಬೇಕು. ಪ್ರತಿಯೊಂದು ಸಾಮಾಜಿಕ ಸಂಸ್ಥೆಯ ನೈಜ ಯಶಸ್ಸು ಅಡಗಿರುವುದು ಸೌಲಭ್ಯಗಳಿಂದ ವಂಚಿತರಾದ ತಳಮಟ್ಟದ ಜನರನ್ನು ತಲುಪಿದಲ್ಲಿ ಮಾತ್ರ ಎಂದು ಹೇಳಿದರು.
ಯುವಜನರಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿ ಸ್ವಾವಲಂಬಿ ಬದುಕಿಗೆ ಹಾದಿ ನಿರ್ಮಿಸಿಕೊಡಬೇಕು, ಶೋಷಿತರ ಧ್ವನಿಯಾಗಿ ನಿಂತು ಸಾಮಾಜಿಕ ನ್ಯಾಯ ದೊರಕಿಸುವ ದಿಕ್ಕಿನಲ್ಲಿ ನಿರಂತರವಾಗಿ ಶ್ರಮಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಎಚ್.ಡಿ. ಕೋಟೆ ಶಾಸಕರಾದ ಅನಿಲ್ ಚಿಕ್ಕಮಾದು, ನಂಜನಗೂಡು ಶಾಸಕರಾದ ದರ್ಶನ್ ಧ್ರುವನಾರಾಯಣ್, ಗುಂಡ್ಲುಪೇಟೆ ಶಾಸಕರಾದ ಗಣೇಶ್ ಪ್ರಸಾದ್, ಕೆ.ಆರ್. ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

