ಹಾಸನ: ನೈಸ್ ಯೋಜನೆಯನ್ನು ನೈಸ್ ಕಂಪನಿಯಿಂದ ಯಾರೋ ಒಬ್ಬರು ಟೇಕ್ ಓವರ್ ಮಾಡಲು ಹೊರಟಿದ್ದಾರೆ! ಟೇಕ್ ಓವರ್ ಮಾಡಲು ಹೊರಟವರು ಯಾರು? ಎಂಬ ಬಗ್ಗೆ ಈ ರಾಜ್ಯದ ಮುಖ್ಯಮಂತ್ರಿಯೇ ಹೇಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ.ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನೈಸ್ ಯೋಜನೆಯನ್ನು ಆ ಕಂಪನಿಯಿಂದ ಯಾರೊ ಈಗ ಟೇಕ್ ಓವರ್ ಮಾಡಲು ಹೊರಟಿದ್ದಾರೆ! ಮುಖ್ಯಮಂತ್ರಿಯನ್ನು ಕೇಳುತ್ತೇನೆ, ಇದರಲ್ಲಿ ಯಾರ ಪಾಲಿದೆ? ಯಾರು ಅದನ್ನು ಟೇಕ್ ಓವರ್ ಮಾಡಲು ಹೊರಟಿದ್ದಾರೆ ಇವೆಲ್ಲವನ್ನೂ ಅವರೇ ಹೇಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ನೂರಾರು ಜನ ನಾಯಕರು ಬಂದು ಹೋಗಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಹಿಂದಿನ ಎಲ್ಲಾ ಮುಖ್ಯಮಂತ್ರಿಗಳನ್ನು ನೆನಪಿಸಿಕೊಂಡು ಭಾಷಣ ಮಾಡಿದ್ದಾರೆ. ಅವರಿಗೆ ಗೌರವ ತರಬೇಕಾದರೆ ಮುಂದೆಯಾದರೂ ಲೂಟಿ ಹೊಡೆಯುವುದನ್ನು ನಿಲ್ಲಿಸಿ. ರಾಜ್ಯದ ಸಂಪತ್ತನ್ನು ಉಳಿಸಿ. ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಅದನ್ನು ದುರುಪಯೋಗ ಮಾಡಿಕೊಳ್ಳದೆ ಈಗಲಾದರೂ ಪ್ರಯತ್ನ ಮಾಡಿ. ಈಗಾಗಲೇ ಹೈಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದೆ. ನೈಸ್ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ, ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ, ಇಂದೊಂದು ದೊಡ್ಡ ಹಗರಣ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯ ಹೀಗೆ ಹೇಳಿ ಎಷ್ಟು ದಿನವಾಗಿದೆ, ಅದನ್ನು ಮುಖ್ಯಮಂತ್ರಿಗೆ ನೆನಪು ಮಾಡಿಕೊಡಲು ಪತ್ರ ಬರೆದಿದ್ದೇನೆ. ನೈಸ್ ಯೋಜನೆಯನ್ನು ಟೇಕ್ ಓವರ್ ಮಾಡುವ ಚರ್ಚೆಗಳನ್ನು ಸ್ಬಲ್ಪ ದಿನ ನಿಲ್ಲಿಸಿಕೊಳ್ಳಿ ಎಂದು ಹೆಚ್ ಡಿ ಕೆ ಹೇಳಿದರು.
ನನ್ನ ಪತ್ರದ ಬಗ್ಗೆ ಮುಖ್ಯಮಂತ್ರಿ ಹೇಳಿರುವುದನ್ನು ಗಮನಿಸಿದ್ದೇನೆ. ನಾನು ನಿನ್ನ ಪ್ರಕಾರ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ನಾನು ಕೂಡ ಹೇಳಿರುವುದು ಅದನ್ನೇ. ಕಾನೂನು ಮತ್ತು ನ್ಯಾಯಾಲಯ ಏನು ಹೇಳಿದೆ ಎಂಬುದನ್ನು ಗಮನದಲ್ಲಿಟ್ಟು ಕ್ರಮ ಜರುಗಿಸಿ ಎಂದು ಪತ್ರ ಬರೆದು ತಿಳಿಸಿದ್ದೇನೆ ಎಂದು ಹೇಳಿದರು.
ನೈಸ್ ಯೋಜನೆ ಬಗ್ಗೆ ಇದುವರೆಗೂ ನ್ಯಾಯಾಲಯಗಳು ಏನೆಲ್ಲಾ ಆದೇಶಗಳನ್ನು ನೀಡಿದೆ ಎಂಬುದರ ಬಗ್ಗೆ ಉಲ್ಲೇಖ ಮಾಡಿ ಬರೆದಿದ್ದೇನೆ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿರುವ ತನಕ ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತಿದ್ದವು. ಆ ನಂತರ ಹಲವಾರು ರೀತಿಯ ಮಾರ್ಪಾಡುಗಳನ್ನು ಈ ಕಂಪನಿ ಮಾಡಿಕೊಂಡು ಬಂದಿದೆ. ನಂತರದ ದಿನಗಳಲ್ಲಿ ಸರಕಾರ ನಡೆಸುವವರು, ಅಧಿಕಾರಿಗಳು ಆ ಕಂಪನಿಗೆ ಶರಣಾಗಿದ್ದಾರೆ. ಆ ಕಂಪನಿ ಏನೇನು ಬೇಕು ಎಲ್ಲಾ ರೀತಿಯಲ್ಲಿ ದೋಚುವ ಕೆಲಸಕ್ಕೆ ಪ್ರಾರಂಭಿಕ ಹಂತದಲ್ಲೇ ಆರಂಭ ಮಾಡಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ದೇಶದ ಇತಿಹಾಸದಲ್ಲಿ ಬಿಎಂಐಸಿಯ ರಸ್ತೆಗೆ ಸಂಬಂಧಪಟ್ಟಂತೆ ಸರಕಾರದ ದಾರಿ ತಪ್ಪಿಸಿ, ಸರಕಾರದಲ್ಲಿರುವ ಕೆಲ ಪ್ರಮುಖ ವ್ಯಕ್ತಿಗಳು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ದಾರಿ ತಪ್ಪಿಸಿದ್ದಾರೆ. ಕೋರ್ಟ್‌ಗಳಿಗೆ ತಪ್ಪು ದಾಖಲೆಗಳನ್ನು ನೀಡಿ ಅವರ ಪರವಾದ ತೀರ್ಪುಗಳನ್ನು ಪಡೆದುಕೊಂಡಿದ್ದಾರೆ. ದೇಶದ ಇತಿಹಾಸದಲ್ಲೇ ಆ ಯೋಜನೆ ವಿಚಾರವಾಗಿ ಇಷ್ಟೊಂದು ಸಲ ಕೋರ್ಟ್ ಮೆಟ್ಟಿಲೇರಿರುವುದು ಎಲ್ಲಿಯೂ ನಡೆದಿಲ್ಲ. ಆ ಕಂಪನಿ ಮೂವತ್ತು ವರ್ಷಗಳನ್ನು ಪೂರೈಸಿದೆ. 111 ಕಿಲೋಮೀಟರ್ ರಸ್ತೆ ಕಾಮಗಾರಿ ಆಗಬೇಕಿತ್ತು, ಆ ಕೆಲಸ ಪೂರ್ಣಗೊಳಿಸಿಲ್ಲ. ಬೆಂಗಳೂರಿನ ಸುತ್ತಮುತ್ತ ಅವರು ಆಸಕ್ತಿ ಹೊಂದಿದ್ದರೆಯೇ ವಿನಾ ಇಡೀ ರಸ್ತೆ ಮಾಡುವುದಕ್ಕಲ್ಲ,ಅಲ್ಲಿರುವ ಬೆಲೆ ಬಾಳುವ ಭೂಮಿಯನ್ನ ಲಪಟಾಯಿಸಲು ಇವರೆಲ್ಲಾ ಒಂದಾಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ದೂರಿದರು.

