ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ-ಅಶೋಕ

ಬೆಂಗಳೂರು: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಹಗಲು ರಾತ್ರಿ ಧರಣಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಒಬ್ಬ ಸಚಿವನಿಗಾಗಿ ಇಡೀ ಸದನವನ್ನು ಹಾಳು ಮಾಡಿ, ಬರಗಾಲ, ನೈಸ್‌ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸುವುದನ್ನು ತಪ್ಪಿಸುತ್ತಿದ್ದೀರಿ. ನಾವು ಈ ಬಗ್ಗೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಮೊದಲು ಸಚಿವರಿಂದ ರಾಜೀನಾಮೆ ಪಡೆದು ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರಕ್ಕೆ ಈಗಲೂ ಅವಕಾಶವಿದೆ, ಪ್ರತಿಪಕ್ಷದವರು ಮಾತಾಡುವುದನ್ನು ವಿಧಾನಸಭೆಯ ವೀಡಿಯೋದಲ್ಲಿ ತೋರಿಸುತ್ತಿಲ್ಲ, ವಾರ್ತಾ ಇಲಾಖೆಗೆ ಈ ಬಗ್ಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ. ದಲಿತರ ಹಣ ವಾಪಸ್‌ ಬರಬೇಕು ಹಾಗೂ ಸಚಿವ ನಾಗೇಂದ್ರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾವು ಹಗಲು ರಾತ್ರಿ ಧರಣಿ ಮಾಡುತ್ತೇವೆ ಎಂದು ಹೇಳಿದರು.

ಸದನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಇಡೀ ಸರ್ಕಾರ ಸಚಿವ ಬಿ.ನಾಗೇಂದ್ರ ಪರವಾಗಿ ನಿಂತಿದೆ. ಏಕೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪಾಲು ಸಿಕ್ಕಿದೆ. ಉದ್ಯಮಿ ಗೌತಮ್‌ ಅದಾನಿ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಅವರಿಗಾಗಿ ಸುರಂಗ ರಸ್ತೆ ಯೋಜನೆಗಾಗಿ ಉದ್ಯಾನಗಳ ಶೇ.5 ರಷ್ಟು ಜಾಗವನ್ನು ಕಬಳಿಕೆ ಮಾಡುವ ಕಾನೂನು ತರಲಾಗುತ್ತಿದೆ. ಈ ಮೂಲಕ ಬೆಂಗಳೂರನ್ನು ಮಾಲಿನ್ಯ ನಗರವಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ಲಾಲ್‌ಬಾಗ್‌, ಸ್ಯಾಂಕಿ ಟ್ಯಾಂಕಿ, ಕಬ್ಬನ್‌ ಪಾರ್ಕ್‌ ಉದ್ಯಾನಗಳನ್ನು ನಾಶ ಮಾಡಲಾಗುತ್ತಿದೆ. ಇನ್ನು ಬೆಂಗಳೂರು ಗಾರ್ಡನ್‌ ಸಿಟಿಯಿಂದ ಪೊಲ್ಯೂಟೆಡ್‌ ಸಿಟಿಯಾಗಿ ಹಾಗೂ ದೆಹಲಿಯಾಗಿ ಬದಲಾಗಲಿದೆ. ಇಂತಹ ಕಾನೂನು ತರುವ ಮುನ್ನ ನಗರದ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಬೇಕಿತ್ತು. ನಗರದಲ್ಲಿ ಪ್ರತಿ 10 ಜನರಲ್ಲಿ ಒಬ್ಬರಿಗೆ ಅಸ್ತಮಾ ಕಂಡುಬರುತ್ತಿದೆ
ಎಂದು ಆತಂಕ‌ ವ್ಯಕ್ತಪಡಿಸಿದರು.

ಈಗಾಗಲೇ ನೈಸ್‌ ಟೋಲ್‌ ವಿರುದ್ಧ ಜನರು ಸಿಟ್ಟಿಗೆದ್ದಿದ್ದಾರೆ. ಉದ್ಯಾನಗಳಲ್ಲಿ ಶೇ.5 ಭೂ ಬಳಕೆ ಕುರಿತು ಜನರ ನಡುವೆ ಚರ್ಚೆಯಾಗಬೇಕಿತ್ತು. ಬಿಜೆಪಿ ಕೂಡ ಈ ಬಗ್ಗೆ ಚರ್ಚೆ ನಡೆಸಲು ಸಿದ್ಧವಿದೆ. ಆದರೆ ಸರ್ಕಾರ ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುತ್ತಿಲ್ಲ. ಮುಖ್ಯವಾಗಿ ಬರಗಾಲದ ಬಗ್ಗೆ ನಾವು ಚರ್ಚೆ ನಡೆಸಬೇಕಿದೆ. ಹೀಗೆ ಆದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು ಮನೆಗೆ ಕಳುಹಿಸುತ್ತಾರೆ. ಯಾವುದೇ ದಲಿತರು ಮತ ನೀಡುವುದಿಲ್ಲ ಎಂದು ಅಶೋಕ್ ಎಚ್ಚರಿಸಿದರು.