ಸಚಿವ ನಾಗೇಂದ್ರ ವಿರುದ್ಧ ಹೋರಾಟ ಮುಂದುವರಿಯಲಿದೆ: ಆರ್‌.ಅಶೋಕ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ನುಂಗಿದ ರೂವಾರಿ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ
ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸದನದಲ್ಲಿ ಮಾತನಾಡಿದ ಅಶೋಕ್, ಒಬ್ಬ ಸಚಿವರಿಗಾಗಿ 224 ಶಾಸಕರ ಹಕ್ಕು ಚ್ಯುತಿ ಆಗುತ್ತಿದೆ,ನಾವು ನಾಲ್ಕನೇ ದಿನವೂ ಧರಣಿ ಮುಂದುವರಿಸಿದ್ದೇವೆ. ಈ ಬಗ್ಗೆ ಸದನದಲ್ಲಿ ಮಾತನಾಡಿದ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಯಾವುದೇ ಕೇಸ್‌ ಇಲ್ಲ ಎಂದಿದ್ದಾರೆ. ಆದರೆ ಅವರ ಮೇಲೆ 24 ಚಾರ್ಜ್‌ಶೀಟ್‌ಗಳಿವೆ. ಪರಮೇಶ್ವರ್‌ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಚಿವ ನಾಗೇಂದ್ರ ಅವರ ವಿರುದ್ಧ ಇರುವ ಪ್ರಕರಣಗಳ ಸಂಪೂರ್ಣ ದಾಖಲೆ ನನ್ನ ಬಳಿ ಇದೆ, ಅದರ ಸಂಖ್ಯೆಗಳನ್ನು ಕೂಡ ನೀಡುತ್ತೇನೆ ಎಂದು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಪಿ.ಚಂದ್ರಶೇಖರನ್‌ ಅವರ ಹೆಂಡತಿಗೆ ಪಿಂಚಣಿ ನೀಡಿಲ್ಲ, ಉದ್ಯೋಗ ನೀಡಿಲ್ಲ. ಆದರೆ ನಾಗೇಂದ್ರ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಬರಗಾಲ ಘೋಷಣೆ ಮಾಡಬೇಕು, ಬರಗಾಲ ಇದೆ ಎಂಬುದನ್ನು ಸರ್ಕಾರವೇ ಒಪ್ಪಿಲ್ಲ, ಬರಗಾಲಕ್ಕೆ ಇಷ್ಟು ಹಣ ನೀಡುತ್ತೇವೆ, ಕುಡಿಯುವ ನೀರಿಗೆ ಇಷ್ಟು ಹಣ ನೀಡಿದ್ದೇವೆ ಎಂದು ಸರ್ಕಾರ ಹೇಳಬೇಕು ಎಂದು ‌ಆಗ್ರಹಿಸಿದರು.

ಸಚಿವ ನಾಗೇಂದ್ರ ದಲಿತ ಹೆಸರಿನಲ್ಲಿ ರಕ್ಷಣೆ ಪಡೆಯಲು ನೋಡುತ್ತಿದ್ದಾರೆ. ಆದರೆ ನಿಗಮದ ಹಣ ಸಂಪೂರ್ಣವಾಗಿ ದಲಿತರಿಗೆ ಸೇರಿದೆ. ಕೋಟ್ಯಂತರ ದಲಿತರು ಬೇಕಾ ಅಥವಾ ಒಬ್ಬ ನಾಗೇಂದ್ರ ಬೇಕಾ ಎಂದು ಕಾಂಗ್ರೆಸ್‌ ಸರ್ಕಾರ ತೀರ್ಮಾನಿಸಬೇಕು ಎಂದು ಹೇಳಿದರು.

ಬಿಜೆಪಿಯವರು ವಂದೇಮಾತರಂ ಹಾಡನ್ನು ಬರೆದಿಲ್ಲ. ಹೋರಾಟಗಾರ ಬಂಕಿಮ ಚಂದ್ರ ಚಟರ್ಜಿ ಬರೆದ ವಂದೇಮಾತರಂ ಹಾಡನ್ನು ಸ್ವಾತಂತ್ರ್ಯ ಹೋರಾಟಗಾರರು ಪೂರ್ತಿಯಾಗಿ ಹಾಡುತ್ತಿದ್ದರು. ಇದು ಅಂದಿನ ಯುವಜನರಿಗೆ ದೊಡ್ಡ ಪ್ರೇರಣೆಯಾಗಿತ್ತು. ಅಂತಹ ಹೋರಾಟಗಾರರಿಗೆ ಬೆಲೆ ಕೊಡದ ಕಾಂಗ್ರೆಸ್‌ನ ಯೋಗ್ಯತೆ ಈಗ ಗೊತ್ತಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ವಂದೇಮಾತರಂ ಗೀತೆ ಹಾಡುವಾಗ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಗೀತೆಗೆ ಗೌರವ ನೀಡಲಿಲ್ಲ. ಇವರು ಭಾರತದವರೇ ಅಥವಾ ಇಟಲಿಯವರೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಆರ್‌ಎಸ್‌ಎಸ್‌ ಕಾರ್ಯಕ್ರಮಗಳಲ್ಲಿ ಜನಗಣಮನ ಹಾಗೂ ವಂದೇಮಾತರಂ ಹಾಡಲಾಗುತ್ತದೆ. ಸಂಘದ ಯಾರೂ ಇಟಲಿಯವರಲ್ಲ ಎಂದು ಟಾಂಗ್ ಅಶೋಕ ಟಾಂಗ್ ನೀಡಿದರು.