ಹೈದರಾಬಾದ್: ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಮಹಿಳಾ ಪ್ರಿನ್ಸಿಪಾಲ್ ಹತ್ಯೆ ಪ್ರಕರಣ ವವನ್ನು ತೆಲಂಗಾಣದ ನಲ್ಗೊಂಡ ಪೊಲೀಸರು ಭೇದಿ ಸಿದ್ದಾರೆ.
ಹಣ ಮತ್ತು ದುಂದು ವೆಚ್ಚಕ್ಕಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೊಂಡಮಲ್ಲೇಪಲ್ಲಿ ಯಲ್ಲಿರುವ ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಮತ್ತು ನಿರ್ದೇಶಕಿ ಕಲ್ಲು ರೂಪಾ ರೆಡ್ಡಿಯವರನ್ನು ಆ.11 ರಂದು ಇಬ್ಬರು ವಿದ್ಯಾರ್ಥಿಗಳು ಹತ್ಯೆ ಮಾಡಿದ್ದರು.
ಹೈದರಾಬಾದ್‌ನಲ್ಲಿದ್ದ ಅವರ ಪತಿ ಕರೆ ಮಾಡಿದಾಗ ರೂಪಾ ರೆಡ್ಡಿ ಉತ್ತರಿಸಿರಲಿಲ್ಲ.ಇದರಿಂದ ಆತಂಕಗೊಂಡ ಪತಿ ನೆರೆಹೊರೆಯವರಿಗೆ ನೋಡುವಂತೆ ಮನವಿ ಮಾಡಿದ್ದರು.
ಆಗ ನೆರೆಹೊರೆಯವರು ಮನೆ ಬಳಿ ನೋಡಿದಾಗ ರೂ ರೆಡ್ಡಿ ಅವರ ಮೃತದೇಹ ಕಂಡುಬಂದಿದೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಈ ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು, ಬೆರಳಚ್ಚು, ತಾಂತ್ರಿಕ ದತ್ತಾಂಶ ಮತ್ತು ಶಂಕಿತರ ಚಲನವಲನಗಳನ್ನು ಪರಿಶೀಲಿಸಿ, 80 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದರು.
ಹತ್ಯೆಗೂ ಮುನ್ನ ರೂಪಾ ರೆಡ್ಡಿ ತನ್ನ ಚಿಕ್ಕಮ್ಮನೊಂದಿಗೆ ಮಾತನಾಡುವಾಗ ‘ಬಾಬು’ ಎಂಬ ಪದವನ್ನು ಬಳಸಿದ್ದರು. ನಂತರ ಫೋನ್ ಸ್ವಿಚ್ ಆಫ್ ಆಗಿತ್ತು. ಈ ಪದದಿಂದ ಯಾರನ್ನು ಉಲ್ಲೇಖಿಸಿರಬಹುದು ಎಂದು ಜಾಡು ಹಿಡಿದು ಹೊರಟ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿತ್ತು.
ಬಾಬು ಪದವನ್ನೇ ಆಧರಿಸಿ ತನಿಖಾ ತಂಡ ಶಾಲೆಯ ತೆರಳಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದರು. ಕೊಲೆಯಾದ ದಿನ ಶಾಲೆಗೆ ಗೈರಾಗಿದ್ದ ಐದು ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು. ಅದರಲ್ಲಿ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಕಳೆದ ಕೆಲವು ದಿನಗಳಿಂದ ಬಹಳ ಹಣ ಖರ್ಚು ಮಾಡುವುದು, ಪಾರ್ಟಿಗಳನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ,ನಂತರ ಇಬ್ಬರು ವಿದ್ಯಾರ್ಥಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಾಯಿಬಿಟ್ಟಿದ್ದಾರೆ.
ಕೊಲೆ ಆರೋಪ ಹೊತ್ತ ಆರೋಪಿ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ನಗದು ಮತ್ತು ಮೊಬೈಲ್ ಫೋನ್ ಪತ್ತೆಯಾಗಿದ್ದವು. ಈ ಬಗ್ಗೆ ರೂಪಾ ರೆಡ್ಡಿಯವರು ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿದ್ದರು.ಜತೆಗೆ ಅವರನ್ನು ಹಾಸ್ಟೆಲ್‌ನಿಂದ ಮನೆಗೆ ಕಳುಹಿಸಿದ್ದರು. ಇದು ಪ್ರಾಂಶುಪಾಲರ ವಿರುದ್ಧ ಕೋಪಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೈ ಗವಸುಗಳನ್ನು ಬಳಸಿದ್ದ ಬಾಲಕ
ಪ್ರಿನ್ಸಿಪಾಲ್ ಮನೆಯನ್ನು ಪತ್ತೆ ಮಾಡಿದ್ದಾನೆ, ಆರೋಪಿಗಳು ಐದು ದಿನಗಳ ಕಾಲ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಇದಕ್ಕಾಗಿ ಚಾಕು ಮತ್ತು ಗುರುತನ್ನು ಮರೆಮಾಡಲು ಕೈಗವಸುಗಳನ್ನು ಸಹ ಖರೀದಿಸಿದ್ದರು.
ಕೊಲೆಯಾದ ದಿನ, ವಿದ್ಯಾರ್ಥಿಗಳಲ್ಲಿ ಒಬ್ಬ ಮಂಕಿ ಕ್ಯಾಪ್ ಮತ್ತು ಕೈಗವಸುಗಳನ್ನು ಧರಿಸಿ ಮನೆಗೆ ಪ್ರವೇಶಿಸಿದ್ದನು. ಮಲಗುವ ಕೋಣೆಯಲ್ಲಿ ಇಟ್ಟಿದ್ದ 2.50 ಲಕ್ಷ ರೂ.ಗಳನ್ನು ಕದ್ದು ಓಡಿಹೋಗಲು ಯತ್ನಿಸಿದ್ದ. ಈ ವೇಳೆ ಮಂಕಿ ಕ್ಯಾಪ್ ಜಾರಿದ್ದು, ರೂಪಾ ರೆಡ್ಡಿಯವರು ತನ್ನನ್ನು ಗುರುತಿಸುತ್ತಾರೆ ಎಂಬ ಭಯದಲ್ಲಿ ಚಾಕುವಿನಿಂದ 27 ಬಾರಿ ಇರಿದಿದ್ದಾನೆ.
ಕೊಲೆಯ ನಂತರ, ಆರೋಪಿಗಳು ಹಣವನ್ನು ತೆಗೆದುಕೊಂಡು ರಕ್ತಸಿಕ್ತ ಬಟ್ಟೆ ಮತ್ತು ಮಂಕಿ ಕ್ಯಾಪ್ ಅನ್ನು ಹೂತುಹಾಕುವ ಮೂಲಕ ಸಾಕ್ಷ್ಯವನ್ನು ಮರೆಮಾಡಲು ಪ್ರಯತ್ನಿಸಿದರು. ಅಲ್ಲಿಂದ ಗೋವಾ ಪ್ರವಾಸಕ್ಕೆ ಹೋಗಿದ್ದರು. ಕೊಲೆಗೂ ಮುನ್ನ ಬೇಗ ಹಣ ಗಳಿಸುವುದು ಹೇಗೆಂಬ ಬಗ್ಗೆ ವಿಡಿಯೋ ಒಂದನ್ನು ಸರ್ಚ್ ಮಾಡಿ ನೋಡಿದ್ದರು ಎಂದು ಗೊತ್ತಾಗಿದೆ.
ಆರೋಪಿಗಳಿಂದ ರಕ್ತದ ಕಲೆಗಳಿರುವ ಕೆಲವು ನೋಟುಗಳು,ಅವರು ಖರೀದಿಸಿದ ಐಫೋನ್ ಮತ್ತು ರೂಪಾ ರೆಡ್ಡಿ ಅವರ ಫೋನ್ ಸೇರಿದಂತೆ 1.54 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

