ನಾಗೇಂದ್ರ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಕ್ಲೀನ್‌ ಚಿಟ್‌ ಪಡೆಯಲಿ -ಅಶೋಕ

ಬೆಂಗಳೂರು: ಸಚಿವ ಬಿ.ನಾಗೇಂದ್ರ, ಇಡಿ ಮತ್ತು ಸಿಬಿಐ ತನಿಖೆಯಲ್ಲಿ ಕ್ಲೀನ್‌ ಚಿಟ್‌ ಪಡೆದಿಲ್ಲ. ಅವರು ಕನಿಷ್ಠ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಾದರೂ ಕ್ಲೀನ್‌ ಚಿಟ್‌ ಪಡೆಯಲಿ,ನಂತರ ಸಚಿವರಾಗಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಐವತ್ತು ವರ್ಷಗಳಿಂದಲೂ ಇದೆ. ಆದರೆ ಸಚಿವ ಬಿ.ನಾಗೇಂದ್ರ ಇವುಗಳ ದಾಳಿ ರಾಜಕೀಯ ಪ್ರೇರಿತ ಎನ್ನುತ್ತಾರೆ. ಹಾಗಾದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಹೇಗೆ ನಡೆಯಿತು ಎಂದು ಪ್ರಶ್ನಿಸಿದರು.

ನಾಗೇಂದ್ರ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ 1.2 ಕೋಟಿ ರೂ. ಜಮೆಯಾಗಿದೆ. ಅವರ ಸಂಬಂಧಿಕರ ಖಾತೆಗೆ ಹಣ ಜಮೆಯಾಗಿದೆ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ನೋಡಿದರೆ ಅವರ ಸಂಬಂಧಿಕರು ಅದನ್ನು ಒಪ್ಪಿಕೊಂಡಿದ್ದಾರೆ. ನಿಗಮದ ಹಣ 600 ಖಾತೆಗಳಿಗೆ ಹೋಗಿದೆ ಎಂದರೆ ಅದಕ್ಕೆ ಸಚಿವರ ಸಹಮತ ಇದೆ ಎಂದೇ ಅರ್ಥ. ಸಚಿವರ ಸಹಾಯಕ ನಾಗರಾಜ್‌ ಅವರ ಖಾತೆಗೂ ಹಣ ಬಂದಿದೆ ಎಂದು ಅಶೋಕ ಹೇಳಿದರು.

ಈ ಹಣ ಆಂಧ್ರಪ್ರದೇಶದ ಸಹಕಾರಿ ಬ್ಯಾಂಕ್‌ಗೆ ಹೋಗಿ ಬಳಿಕ ಬಳ್ಳಾರಿ ಜಿಲ್ಲೆಗೆ ಹೋಗಿದೆ. ರಾಜ್ಯದಲ್ಲಿ ಬೇರೆ ಯಾವ ಜಿಲ್ಲೆಗೂ ಆ ಹಣ ಹೋಗಿಲ್ಲ. ಇದು ಪೂರ್ವ ಯೋಜಿತ ಕಳ್ಳತನ ಎಂದು ದೂರಿದರು

ಸಿಬಿಐ ಮೂರು ಚಾರ್ಜ್‌ಶೀಟ್‌ ನೀಡಿದ್ದು, ಅದರಲ್ಲಿ ಪ್ರಮುಖ ಆರೋಪಿ ಇವರೇ ಆಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ 89 ಕೋಟಿ ರೂ. ಅಕ್ರಮ ನಡೆದಿದೆ ಎಂದು ಸದನದಲ್ಲೇ ಒಪ್ಪಿಕೊಂಡಿದ್ದರು. ಎಸ್‌ಐಟಿ ರಚಿಸಿ ಕ್ಲೀನ್‌ ಚಿಟ್‌ ತೆಗೆದುಕೊಂಡಿದ್ದಾರೆ. ಆದರೆ ಉಳಿದ ಸಿಬಿಐ, ಜಾರಿ ನಿರ್ದೇಶನಾಲಯ ಕೂಡ ಕ್ಲೀನ್‌ ಚಿಟ್‌ ನೀಡಬೇಕಿದೆ. ಬಿಜೆಪಿ ಅವಧಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಆರೋಪ ಬಂದಾಗ ತನಿಖೆ ನಡೆದಿತ್ತು. ಕ್ಲೀನ್‌ ಚಿಟ್‌ ಬಂದರೂ ಅವರನ್ನು ಸಚಿವರಾಗಿ ಮರು ನೇಮಕ ಮಾಡಲಿಲ್ಲ. ಜನಪ್ರತಿನಿಧಿ ನ್ಯಾಯಾಲಯದಲ್ಲಿ ಕ್ಲೀನ್‌ ಚಿಟ್‌ ತೆಗೆದುಕೊಂಡು ಬಂದು ಸಚಿವರಾಗಿ ನೇಮಕವಾದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.

ತನಿಖೆ ಮಾಡದೆಯೇ ನಾಗೇಂದ್ರ ಜೈಲಿಗೆ ಹೋಗಲು ಹೇಗೆ ಸಾಧ್ಯ? ತನಿಖೆಯಾಗದೇ ಇದ್ದಲ್ಲಿ 9,000 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.

ಚಾಮರಾಜನಗರದಲ್ಲಿ ಸ್ಥಳೀಯರಾದ ಮೂವರನ್ನು ಎನ್‌ಕೌಂಟರ್‌ ಮಾಡಿರುವುದರ ವಿರುದ್ಧ ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡಿದೆ. ಇದು ರಾಜ್ಯಕ್ಕೆ ಆಗಿರುವ ಅಪಮಾನ. ರಾಜ್ಯದ ಸಮಸ್ಯೆಯನ್ನು ಇಲ್ಲೇ ಪರಿಹಾರ ಮಾಡಬೇಕಿತ್ತು. ಅಲ್ಲಿ ಪರಿಹಾರ ಕೊಡುವುದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದು ಅಶೋಕ್ ಹೇಳಿದರು.