ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಆರೋಪ ಎದುರಿಸುತ್ತುರುವ ಸಚಿವ ಬಿ. ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ.
ದೆಹಲಿಗೆ ತೆರಳಿದ್ದ ನಾಗೇಂದ್ರ, ರಾಹುಲ್ ಗಾಂಧಿ,ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಇನ್ನಿತರ ನಾಯಕರ ಜೊತೆ ಮಾತನಾಡಿ ಇಂದು ಬೆಂಗಳೂರಿಗೆ ವಾಪಸಾ ದರು.
ನಂತರ ತುರ್ತು ಸುದ್ದಿಗೋಷ್ಠಿ ಕರೆದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಪ್ರಕಟಿಸಿದರು. ಈ ವೇಳೆ ಭಾವುಕರಾಗಿ ನಾಗೇಂದ್ರ ಕಣ್ಣೀರು ಹಾಕಿದರು.
ನಾನು ಬಳ್ಳಾರಿ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ ನಾನು ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ ಜನರೇ ಎಲ್ಲವನ್ನು ತೀರ್ಮಾನಿಸುತ್ತಾರೆ ನೀವು ಚುನಾವಣೆ ಎದುರಿಸಿ ಯಾರು ಗೆಲ್ಲುತ್ತಾರೆ ನೋಡೇ ಬಿಡೋಣ ಎಂದು ಸವಾಲು ಹಾಕಿದರು.
ವಾಲ್ಮೀಕಿ ನಿಗಮದ ಒಂದೇ ಒಂದು ಸುಳ್ಳು ಇಟ್ಟುಕೊಂಡು ಬಿಜೆಪಿಗರು ನನ್ನ ರಾಜನಾಮೆಗೆ ಹಠ ಹಿಡಿದರು.ನಮ್ಮ ಪಕ್ಷದ ಎಲ್ಲಾ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮುಖ್ಯಮಂತ್ರಿಗಳಿಗೆ ನನ್ನ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಅದರಲ್ಲೂ ಬಳ್ಳಾರಿಯ ಬಿಜೆಪಿ ಲೀಡರ್ ಗಳಿಗೆ ಹೇಳುವುದು ಇಷ್ಟೇ. ನನ್ನ ಮೇಲೆ ಹೊರಿಸಿರುವ ಆರೋಪಗಳನ್ನೆಲ್ಲ ಸಾಬೀತು ಪಡಿಸಿ ಎಂದು ನಾಗೇಂದ್ರ ಆಗ್ರಹಿಸಿದರು.

