450 ಕೆಜಿ ಭಾರ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದ ಮಹೇಂದ್ರ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಗಜಪಡೆಯನ್ನು ಸನ್ನದ್ಧಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದ್ದು, ಸಂಪ್ರದಾಯದಂತೆ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ.

ಸೋಮೇಶ್ವರ ದೇವಾಲಯದ ಬಳಿ ಎಲ್ಲ ಆನೆಗಳಿಗೂ ಅರ್ಚಕ ಪ್ರಸಾದ್ ರಾವ್ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಗಾದಿ ಮತ್ತು ನಮ್ದಾ ಹಾಗೂ ಮರಳಿನ ಮೂಟೆ ಇಡುವ ತೊಟ್ಟಿಲಿಗೂ ಪೂಜೆ ನೆರವೇರಿಸಲಾಯಿತು.

ನಂತರ ಮಹೇಂದ್ರ ಆನೆಗೆ ಗಾದಿ ಮತ್ತು ನಮ್ದಾ ಕಟ್ಟಿ ಹಗ್ಗ ಬಿಗಿದು ಬಳಿಕ ಅದರ ಮೇಲೆ ತೊಟ್ಟಿಲನ್ನು ಕಟ್ಟಲಾಯಿತು. ನಂತರ 50 ಕೆಜಿ ತೂಕದ 9 ಮರಳಿನ ಮೂಟೆಗಳನ್ನು ಇರಿಸಿ ಒಟ್ಟು 450 ಕೆಜಿ ಭಾರ ಹೊರುವ ತಾಲೀಮಿಗೆ ಚಾಲನೆ ನೀಡಲಾಯಿತು.

ಮಹೇಂದ್ರ ಆನೆಗೆ ಗಾದಿ, ನಮ್ದಾ, ಕಬ್ಬಿಣದ ತೊಟ್ಟಿಲು ಹಾಗೂ ಮರಳಿನ ಮೂಟೆ ಸೇರಿದಂತೆ ಸುಮಾರು 450 ಕೆಜಿ ಭಾರವನ್ನು ಹೊರಿಸಿ ತಾಲೀಮು ನಡೆಸಲಾಯಿತು. ಈ ವೇಳೆ ಮಹೇಂದ್ರನಿಗೆ ಕುಮ್ಕಿ ಆನೆಗಳಾದ ಲಕ್ಷ್ಮಿ ಮತ್ತು ಕಾವೇರಿ ಸಾಥ್ ನೀಡಿದವು.

ಭಾನುವಾರ ಸಂಜೆ ಅರಮನೆಯಿಂದ ಬಲರಾಮ ದ್ವಾರದ ಮೂಲಕ ಹೊರಟು ಮಹೆಂದ್ರ, ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ, ಹಳೇ ಆರ್.ಎಂ.ಸಿ ವೃತ್ತ, ಹೊಸಬೀದಿ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿ, ಪುನಃ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಆಗಮಿಸಿತು. ಈ ಮೂಲಕ ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ನಡೆಯಿತು.

ಯಾವುದೇ ಅಳುಕಿಲ್ಲದೆ ಮಹೇಂದ್ರ, ಲಕ್ಷ್ಮಿ ಮತ್ತು ಕಾವೇರಿ ಆನೆಗಳೊಂದಿಗೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಮಹೇಂದ್ರ ಮುಂದೆ ಮುಂದೆ ಸಾಗಿದರೆ ಏಕಲವ್ಯ, ಗೋಪಿ, ಪ್ರಶಾಂತ್, ಶ್ರೀರಾಮ ಮತ್ತು ಧನಂಜಯ ಆನೆಗಳು ಹಿಂಬಾಲಿಸಿದವು.

8 ಆನೆಗಳಿಗೆ ಭಾರ: ಅರಮನೆಗೆ ಮೊದಲ ತಂಡದಲ್ಲಿ 9 ಆನೆಗಳನ್ನು ಕರೆತಂದಿದ್ದು, ಇದರಲ್ಲಿ ಶ್ರೀಕಂಠ ಆನೆಯನ್ನು ತಾಲೀಮಿನಿಂದ ಹೊರಗಿಟ್ಟು, ಉಳಿದ ಎಲ್ಲಾ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಯಿತು.

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ದಸರಾ ಗಜಪಡೆ ಅರಮನೆ ಅಂಗಳದಲ್ಲಿ ಮಣ್ಣಿನಲ್ಲಿ ಆಟ ಆಡಿಕೊಂಡು, ಪೌಷ್ಟಿಕ ಆಹಾರ ಸೇವಿಸಿ ಅರಮನೆ ಶೇಡ್‌ನಲ್ಲಿ ಚಿನ್ನಾಟ ಆಡುತ್ತಿವೆ.