ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅಂಬಾವಿಲಾಸ ಅರಮನೆ ಆವರಣದಲ್ಲಿ ಫಿರಂಗಿ ವಾಹನಗಳ ಪೂಜೆ ವಿಧ್ಯುಕ್ತವಾಗಿ ನೆರವೇರಿತು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಇಂದು 11 ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಯಿತು.

ದಸರಾ ಸಿದ್ಧತೆಗಳ ಪ್ರಮುಖ ಭಾಗವಾಗಿ ಈ ಪೂಜೆಯನ್ನು ಆಯೋಜಿಸಲಾಗಿತ್ತು. ನಿನ್ನೆಯೇ ಫಿರಂಗಿ ಗಾಡಿಗಳನ್ನು ಸ್ವಚ್ಛಗೊಳಿಸಿ ಪೂಜೆಗೆ ಸಜ್ಜುಗೊಳಿಸಲಾಗಿತ್ತು.
ಕುಶಾಲತೋಪು ಸಿಡಿಸುವ ವೇಳೆ ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಲು ಪ್ರತಿ ವರ್ಷ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಸಂದರ್ಭದಲ್ಲಿ 21 ಕುಶಾಲತೋಪು ಸಿಡಿಸುವುದು ಸಂಪ್ರದಾಯ.
ದಕ್ಕಾಗಿ ಆನೆ ಮತ್ತು ಕುದುರೆಗಳಿಗೆ ಸಿಡಿಲಿನ ಶಬ್ದಕ್ಕೆ ಬೆಚ್ಚದಂತೆ ಇರಲು ಪೂರ್ವಭಾವಿ ತಾಲೀಮು ನೀಡಲಾಗುತ್ತದೆ. ಈ ತಾಲೀಮಿನಲ್ಲಿ ಪಡೆಯ 35ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಲಿದ್ದಾರೆ.
ಈ ಪೂಜೆಯೊಂದಿಗೆ ದಸರಾ ಮಹೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆತಿದೆ.

