ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇನೆ ಮುಖ್ಯಮಂತ್ರಿಯಾಗಲಿ, ಅವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, “ಈ ಹಿಂದೆ ನನಗೆ ಅವಕಾಶ ಸಿಕ್ಕರೆ 2028ಕ್ಕೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ. ಈಗ ಡಿಕೆಶಿ ಅವರೇ, ನಾನೇ ಮುಂದೆಯೂ ಸಿಎಂ ಎಂದು ಹೇಳುತ್ತಿದ್ದಾರೆ. ಇದರಿಂದ ನನಗೆ ಸಂತೋಷವಾಗಿದೆ. 2028ಕ್ಕೂ ಅವರೇ ಸಿಎಂ ಆಗಲಿ, ಅವರಿಂದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ತಿಳಿಸಿದರು.
ನನಗೆ ಇನ್ನೂ ವಯಸ್ಸಿದೆ,ಸಿಎಂ ಸ್ಥಾನಕ್ಕಾಗಿ ಕಾಯುತ್ತೇನೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ದಿವಾಳಿಯಾಗಿಲ್ಲ ಎಲ್ಲವೂ ಸರಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ಆರ್ಥಿಕ ಇಲಾಖೆ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಹೇಳಿಲ್ಲ. ಬಜೆಟ್‌ನಲ್ಲಿ ಏನು ಘೋಷಣೆ ಮಾಡಿದ್ದೇವೆಯೋ ಅಷ್ಟಕ್ಕೆ ಮಾತ್ರ ಹಣ ಇದೆ. ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ಸ್ಪಷ್ಟಪಡಿಸಿದೆ ಎಂದು ಸತೀಶ್ ಜಾತಕಿಹೊಳಿ ತಿಳಿಸಿದರು.
ಇಂತಹ ಸಲಹೆಯನ್ನು ಎಲ್ಲಾ ಸರ್ಕಾರಗಳಿಗೂ ಆರ್ಥಿಕ ಇಲಾಖೆ ನೀಡುತ್ತದೆ. ಹೊಸ ಘೋಷಣೆ ಮಾಡುವಾಗ ಯೋಚನೆ ಮಾಡಿ ಘೋಷಿಸಿ ಎಂದು ಸೂಚಿಸಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತೇವೆ ಎಂದು ಸಚಿವರು ಹೇಳಿದರು.

