ಬೆಂಗಳೂರು: ಕೆಪಿಎಸ್ಸಿ ಯಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ ಏಕೆ ಮೌನವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಹೆಚ್ ಡಿ ಕೆ,ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು ಎಂದು ನವದೆಹಲಿಯಲ್ಲಿ ಇನ್ನಿಲ್ಲದ ಗಲಾಟೆ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜೆನ್ ಜಿ ಗಳು ಈಗೆಲ್ಲಿ ಹೋಗಿದ್ದಾರೆ? ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳ ನೇಮಕಾತಿ ಅಕ್ರಮ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮ ಸೇರಿದಂತೆ ಕಾಸಿಗಾಗಿ ಉದ್ಯೋಗಗಳನ್ನು ಮಾಡಿಕೊಳ್ಳುತ್ತಿರುವ ಭ್ರಷ್ಟಾಚಾರ ಗೊತ್ತಿಲ್ಲವೆ,ಇದನ್ನೆಲ್ಲ ಏಕೆ ಪ್ರಶ್ನಿಸುವುದಿಲ್ಲ ಕೇಳಿದರು.
ಕರ್ನಾಟಕದಲ್ಲಿ ಕಡುಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡಮಟ್ಟದ ಕೆಟ್ಟ ಹೆಸರು ಬರುತ್ತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶಿವಕುಮಾರ್ ಅವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಆದರೆ ಅವರದೇ ಸರ್ಕಾರ ಎಸುಗುತ್ತಿರುವ ಅಕ್ರಮಗಳ ಬಗ್ಗೆ ಅವರು ಜಾಣಮೌನ ವಹಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಬರ ನಿರ್ವಹಣೆಯಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿದೆ. ಒಂದು ಕಡೆ ಖಜಾನೆಯನ್ನು ಖಾಲಿ ಮಾಡಿಕೊಂಡು ಇನ್ನೊಂದು ಕಡೆ ಜನರಿಗೆ ಮಂಕು ಬೂದಿ ಹಚ್ಚಲು ಯೋಜನೆಗಳ ಮೇಲೆ ಯೋಜನೆಗಳನ್ನು ಘೋಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಕೆಪಿಎಸ್ಸಿ ಅಕ್ರಮಗಳ ತನಿಖೆ ನಡೆಸಲು ರಾಜ ಹೈಕೋರ್ಟ್ ಎಸ್ಐಟಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಆ ಅಧಿಕಾರಿಗಳು ಬೇಡವೆಂದು ಈ ಸರ್ಕಾರ ನಾಟಕ ಆಡುತ್ತಿದೆ. ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಹೆಬ್ಬೆಟ್ಟು ಒತ್ತುವ ಅಧಿಕಾರಿಗಳು ಇವರಿಗೆ ಬೇಕಾಗಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇವರಿಗೆ ಆಗಿ ಬರುವುದಿಲ್ಲ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.
ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ,ಕೇಂದ್ರ ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆ. ಕಳೆದ 78 ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡು ಬಂದಿದ್ದರೆ ಅದು ಚುನಾವಣಾ ಆಯೋಗದ ಜವಾಬ್ದಾರಿಯಿಂದಲೇ. ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರ ನಡುವೆ ಇರುವ ಅಭಿಪ್ರಾಯ ಭೇದದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಇಟ್ಟುಕೊಂಡು ಅದನ್ನೇ ದೊಡ್ಡ ಅಪರಾಧದಂತೆ ಬಿಂಬಿಸಿ ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಶಾಸಕರು ಎರಡು ಮದುವೆಯಾಗಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ಕುಮಾರಸ್ವಾಮಿ, “ಸದನದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಮಾತನಾಡುತ್ತಾರಾ? ಇಂತಹ ಮುಖ್ಯಮಂತ್ರಿಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ದೇವರೇ ಕಾಪಾಡಬೇಕು. ಈ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿಭಟನೆ ಮಾಡಬೇಕಿತ್ತು ಎಂದು ಹೇಳಿದರು.

