ಬೆಂಗಳೂರು: ಮತಗಳ್ಳತನ ವಿಚಾರವಾಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದ ಅಂಶಗಳು ನಿಜವಾಗಿವೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಶಿವಕುಮಾರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಹೈಕಮಾಂಡ್ ನಾಯಕರು ಮತಗಳ್ಳತನ ವಿಚಾರವಾಗಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಕರೆದಿದ್ದು, ಈ ವಿಚಾರವಾಗಿ ಚರ್ಚೆ ಮಾಡಲು ಖರ್ಗೆ ಸಾಹೇಬರ ಮನೆಗೆ ಭೇಟಿ ನೀಡಿದ್ದೇನೆ. ಆಯೋಗದಲ್ಲಿನ ಅಪಸ್ವರ ಹಾಗೂ ಅಕ್ರಮಗಳು ಬೆಳಕಿಗೆ ಬಂದಿವೆ. ಈ ವಿಚಾರವಾಗಿ ದೇಶವೇ ಜಾಗೃತಗೊಂಡಿದ್ದು, ಪಕ್ಷದ ಮುಂದಿನ ಹೋರಾಟದ ರೂಪುರೇಷೆ ಕುರಿತು ಚರ್ಚೆ ಮಾಡಿದ್ದೇವೆ. ಕಾರ್ಯಕಾರಿ ಸಮಿತಿ ಸಭೆ ಬಳಿಕ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗಿದೆ” ಎಂದು ತಿಳಿಸಿದರು.
ಚುನಾವಣಾ ಸೋಲಿನ ಹತಾಶೆಯಿಂದ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ,ನಾವು ಹೇಳಿದ್ದನ್ನೇ ಚುನಾವಣಾ ಆಯೋಗದವರು ಹೇಳಿದ್ದಾರಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದ ತೀರ್ಮಾನ ಆಗಬೇಕು. ಆದರೆ ಮೂವರಲ್ಲಿ ಇಬ್ಬರು ಆಯುಕ್ತರ ಭಿನ್ನಮತ ನಡುವೆ ತೀರ್ಮಾನ ಮಾಡಲಾಗಿದೆ. ಈಗ ಅವರ ಮಧ್ಯೆ ತೇಪೆ ಹಚ್ಚಿ ಕೂರಿಸಿದ್ದಾರೆ ಎಂದು ಹೇಳಿದರು.
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕದ ಕುರಿತು ಕೇಳಿದ ಪ್ರಶ್ನೆಗೆ,ದೆಹಲಿಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಹಿರಿಯ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವುದು. ನಂತರ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡಬೇಕು ಎಂಬ ತೀರ್ಮಾನವಾಗಿದೆ ಎಂದು ಉತ್ತರಿಸಿದರು.
ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಕೇಳಿದ್ದಕ್ಕೆ ‘ದೆಹಲಿಗೆ ಹೋದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಡಿಕೆಶಿ ಉತ್ತರಿಸಿದರು.
ಗದಗದ ಎಇಇ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಬಗ್ಗೆ ಕೇಳಿದಾಗ,ಆ ಅಧಿಕಾರಿ ವಿರುದ್ಧ ಈಗಾಗಲೇ ಹಲವು ದೂರುಗಳು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಬೈರಮಂಗಲದಲ್ಲಿ ರೈತರು ರಸ್ತೆ ತಡೆ ನಡೆಸಿದರಲ್ಲ ಎಂಬ ವರದಿಗಾರರ ಪ್ರಶ್ನೆಗೆ,ರಸ್ತೆ ತಡೆ ಯಾಕೆ ಮಾಡಬೇಕು ರಸ್ತೆ ತಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜಮೀನು ನೀಡುವಂತೆ ಯಾರ ಮೇಲೂ ಒತ್ತಡ ಹಾಕಿಲ್ಲ, ಜಮೀನು ಕೊಡಬೇಡಿ ಎಂದೇ ಹೇಳುತ್ತಿದ್ದೇನೆ. ತಮ್ಮ ಬದುಕು ಕಟ್ಟಿಕೊಳ್ಳಲು ಹಣದ ಅಗತ್ಯವಿರುವವರು ಭೂಮಿ ನೀಡುತ್ತಾರೆ, ಬೇಡ ಎನ್ನುವವರು ಕೊಡುವುದಿಲ್ಲ. ಈ ವಿಚಾರದಲ್ಲಿ ನನಗೆ ಆತುರ, ಪ್ರತಿಷ್ಠೆ ಏನೂ ಇಲ್ಲ. ಕುಮಾರಸ್ವಾಮಿ ಅವರು ಆರಂಭಿಸಿರುವುದನ್ನು ನಾನು ಮುಂದುವರಿಸುತ್ತಿರುವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

