ವಿಪಕ್ಷಗಳು ಕೈ ಜೋಡಿಸದಿದ್ದರೆ ರೈತರ ಹಿತಕ್ಕಾಗಿ ಅಗತ್ಯ ಕ್ರಮ:‌ ಸಿಎಂ ಡಿಕೆಶಿ

ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸರ್ವಪಕ್ಷ ನಿಯೋಗದೊಂದಿಗೆ ಬಾರದಿದ್ದರೆ, ಬಿಜೆಪಿಯವರದ್ದು ಕಪಟ ನಾಟಕ ಎಂಬುದು ಸಾಬೀತಾಗುತ್ತದೆ ಎಂದು ಮುಖ್ಯ ಮಂತ್ರಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡದಿದ್ದರೆ, ರೈತರ ಹಿತಕ್ಕಾಗಿ ನಾವೇ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಕಡಕ್ಕಾಗಿ ಹೇಳಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,
ವಿರೋಧ ಪಕ್ಷಗಳು ಸರ್ವಪಕ್ಷ ನಿಯೋಗದೊಂದಿಗೆ ಸೇರದಿದ್ದರೆ, ರೈತರ ಹಿತಾಸಕ್ತಿಯನ್ನು ಸರ್ಕಾರ ಕಡೆಗಣಿಸುವುದಿಲ್ಲ, ರೈತರ ಹಿತ ಕಾಪಾಡಲು ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

ವಿರೋಧ ಪಕ್ಷದವರ ಈ ನಡೆಯಿಂದ ರಾಜ್ಯದ ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ರೈತರಿಗೆ 25 ಸಾವಿರ, 50 ಸಾವಿರ ಪರಿಹಾರ ನೀಡಿ ಎಂದು ಹೇಳುವವರು ಕೇಂದ್ರ ಸರ್ಕಾರದ ಬಳಿ ಮಾತನಾಡಿ ಅವರೂ ಪರಿಹಾರ ಕೊಡಿಸಬೇಕು ಎಂದು ಡಿಕೆಶಿ ಆಗ್ರಹಿಸಿದರು.

ಬರ ಪರಿಸ್ಥಿತಿ ಅಧ್ಯಯನ ಕುರಿತು ಅ. 3ರಂದು ಕೇಂದ್ರದ ತಂಡ ಬರುತ್ತಿದೆ. ಆ ಸಮಿತಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ಕಾನೂನಿನ ಚೌಕಟ್ಟಿನಲ್ಲಿ ನಮ್ಮ ಅಧಿಕಾರಿಗಳು ನೀಡಲಿದ್ದಾರೆ ಎಂದು ತಿಳಿಸಿದರು.

ಕಸ್ತೂರಿರಂಗನ್ ವರದಿ ಹಾಗೂ ಬರ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ನಡೆಸುವ ಸಂಬಂಧ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು, ಇದೇ ವೇಳೆ ಕೆಲವು ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದು, ಎಸ್ ಐಆರ್ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಿಚಾರದ ಬಗ್ಗೆ ನಡೆಯುತ್ತಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದರು.

ಕಸ್ತೂರಿರಂಗನ್ ವಿಚಾರದಲ್ಲಿ ಕೇಂದ್ರ ಸಚಿವರು, ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೇಳುತ್ತೇನೆ. ಸಮಯ ಪಡೆದು, ರಾಜ್ಯದ ಪರವಾಗಿ ಅಗತ್ಯವಿರುವ ಮನವಿಯನ್ನು ಸಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.