ಏಷ್ಯನ್ ಗೇಮ್ಸ್: ಕರ್ನಾಟಕದ ಕ್ರೀಡಾ ಪಟುಗಳಿಗೆ ಸಿಎಂ ಸನ್ಮಾನ

ಬೆಂಗಳೂರು: ಏಷ್ಯನ್ ಗೇಮ್ಸ್ 2026ರಲ್ಲಿ ದೇಶ ಮತ್ತು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ರಾಜ್ಯದ ಕ್ರೀಡಾಪಟುಗಳನ್ನು ಸಿಎಂ‌ ಡಿ ಕೆ‌ ಶಿವಕುಮಾರ್ ವಿಧಾ‌ನಸೌಧದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

8 ಪದಕ ವಿಜೇತರಿಗೆ ಒಟ್ಟು 8 ಕೋಟಿ ರೂ. ನಗದು ಬಹುಮಾನ ಘೋಷಿಸಿದರು.

ಪದಕ ವಿಜೇತರು ಸೇರಿದಂತೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಹಲವು ಮಹತ್ವದ ಪ್ರೋತ್ಸಾಹದಾಯಕ ಕ್ರಮಗಳನ್ನು ಇದೇ ವೇಳೆ ಸಿಎಂ ಘೋಷಿಸಿದರು.

ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿಗೆ ತಲಾ 5 ಲಕ್ಷ ರೂ. ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಎಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗಗಳ ಕ್ರೀಡಾಪಟುಗಳು ಇದರ ಫಲಾನುಭವಿಗಳಾಗಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನೂ ಸಿಎಂ ಹೆಚ್ಚಳ ಮಾಡಿದ್ದಾರೆ.

ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರೂ. ನೀಡಲಾಗುತ್ತಿತ್ತು. ಸಿಎಂ ಡಿ ಕೆ‌ ಶಿವಕುಮಾರ್ ಅವರು ಚಿನ್ನದ ಪದಕಕ್ಕೆ 1 ಕೋಟಿ ರೂ., ಬೆಳ್ಳಿ ಪದಕಕ್ಕೆ 75 ಲಕ್ಷ ಹಾಗೂ ಕಂಚಿನ ಪದಕಕ್ಕೆ 50 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದ್ದಾರೆ.

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಕೈಗೊಳ್ಳಲಾಗುವುದು.

ಮುಂದಿನ ಹಂತದಲ್ಲಿ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ನೆರವು ನೀಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ‘ಗುರಿ ಒಲಿಂಪಿಕ್ಸ್’ ಯೋಜನೆಗೆ 2026-27ನೇ ಸಾಲಿಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ತಯಾರಿಗಾಗಿ ತಲಾ 10 ಲಕ್ಷ ರೂ. ನಗದು ಪ್ರೋತ್ಸಾಹಧನವನ್ನು ಇವರಿಗೆ ನೀಡಲಾಗುತ್ತದೆ.

ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ ಶೇ.2 ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಮತ್ತು ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್ ಮಹಿಳಾ ತಂಡ, ಚಿನ್ನ), ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್ 4×400 ಮಿಶ್ರ ರಿಲೇ, 4×400 ಮಹಿಳಾ ರಿಲೇ ಬೆಳ್ಳಿ ಮತ್ತು ಚಿನ್ನ)
ತಿಲೋತ್ತಮ ಸೇನ್ (ಶೂಟಿಂಗ್, ಮಹಿಳೆಯರ 50 ಮೀ ರೈಫಲ್, ಬೆಳ್ಳಿ)
ಆಯುಷ್ ಆರ್ ಶೆಟ್ಟಿ (ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ)
ಸ್ನೇಹಾ ಎಸ್.ಎಸ್. ( ಅಥ್ಲೆಟಿಕ್ಸ್ 4×100 ಮಿಶ್ರ ರಿಲೇ ಕಂಚು)
ಅಧಿತಿ ಅಶೋಕ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ)
ಪ್ರಣವಿ ಎಸ್. ಅರಸ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ ಹಾಗೂ ವೈಯಕ್ತಿಕ ಚಿನ್ನ)
ಮೋಹಿತ್ ಹೆಚ್.ಎಸ್. (ಹಾಕಿ ಪುರುಷರ ತಂಡ, ಚಿನ್ನ)

ಯಶಸ್ ಪಾಲಾಕ್ಷ – ಅಥ್ಲೆಟಿಕ್ಸ್
ಸುಪ್ರಿಯಾ ಸಿಂಡಿಗೆರೆ ಬಸವರಾಜು – ಅಥ್ಲೆಟಿಕ್ಸ್
ಉನ್ನತಿ ಅಯ್ಯಪ್ಪ – ಅಥ್ಲೆಟಿಕ್ಸ್
ಎಂ.ಆರ್. ಪೂವಮ್ಮ – ಅಥ್ಲೆಟಿಕ್ಸ್
ಸ್ನೇಹಾ ಎಸ್.ಎಸ್. – ಅಥ್ಲೆಟಿಕ್ಸ್
ಆಯುಷ್ ಶೆಟ್ಟಿ – ಬ್ಯಾಡ್ಮಿಂಟನ್
ಶ್ರೇಯಾಂಕ ಆರ್. ಪಾಟೀಲ್ – ಕ್ರಿಕೆಟ್ T20
ಕೀರ್ತಿ ರಂಗಸ್ವಾಮಿ – ಸೈಕ್ಲಿಂಗ್ ಟ್ರ್ಯಾಕ್
ಫವಾದ್ ಮಿರ್ಜಾ- ಈಕ್ವೇಸ್ಟ್ರೀಯನ್
ಅಧಿತಿ ಅಶೋಕ್ – ಗಾಲ್ಫ್
ಪ್ರಣವಿ ಎಸ್. ಅರಸ್ – ಗಾಲ್ಫ್
ಮೋಹಿತ್ ಹೆಚ್.ಎಸ್. – ಹಾಕಿ
ತಿಲೋತ್ತಮಾ ಸೇನ್ – ಶೂಟಿಂಗ್
ಆಕಾಶ್ ಮಣಿ – ಈಜು
ಶ್ರೀ ಹರಿ ನಟರಾಜ್ – ಈಜು
ದಕ್ಷಣ್ ಎಸ್. – ಈಜು
ಅನೀಶ್ ಗೌಡ – ಈಜು
ಯಶಸ್ವಿನಿ ಘೋರ್ಪಡೆ – ಟೇಬಲ್ ಟೆನ್ನಿಸ್
ಸಿಂಧುಶ್ರೀ – ಅಥ್ಲೆಟಿಕ್ಸ್
ದೀಪು ಮಲ್ಲೇಶ್ – ಸ್ಪೋರ್ಟ್ಸ್ ಕ್ಲೈಂಬಿಂಗ್ ಇವರೆಲ್ಲಾ ಏಷನ್ಸ್ ಗೇಮ್ಸ್ ನಲ್ಲಿ ಭಾಗವಹಿಸಿ ತಲಾ 5 ಲಕ್ಷ ರೂ ಪ್ರೋತ್ಸಾಹ ಪಡೆದ ಕೀಡಾಪಟುಗಳು.