ಮಹೇಶ್ ರೆಡ್ಡಿ ಯಾರಪ್ಪ ಮಿಸ್ಟರ್ ಡಿಕೆಶಿ? -ಎಚ್ ಡಿ ಕ ಪ್ರಶ್ನೆ

ಬೆಂಗಳೂರು: ಹೈದರಾ ಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬ ವ್ಯಕ್ತಿಯ ಜತೆ ಸೇರಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೈಸ್ ಯೋಜನೆಯನ್ನು ಲಪಟಾಯಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಹೈದರಾಬಾದ್ ನಲ್ಲಿ ನೆಲೆಸಿರುವ ಉದ್ಯಮಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಯ ಜತೆ ಮುಖ್ಯಮಂತ್ರಿ ಶಾಮೀಲಾಗಿ ಇಡೀ ಯೋಜನೆಯನ್ನೇ ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಇವರೊಂದಿಗೆ ಇನ್ನಷ್ಟು ಪ್ರಭಾವಿಗಳು ಕೈ ಜೋಡಿಸಿದ್ದಾರೆ. ಹಾಗೆಯೇ, ಯೋಜನೆಗೆ ಸ್ವಾಧೀನ ಮಾಡಿಕೊಂಡಿರುವ ಅಷ್ಟೂ ಭೂಮಿಯನ್ನು ಲೂಟಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ದೂರಿದರು.

ನಾನು ನೋಡುತ್ತಾ ಬಂದಿದ್ದೇನೆ. ಈ ವ್ಯಕ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪಾಪದ ಕೊಡ ತುಂಬಿದೆ. ನೀವು 10 ಸಾವಿರ ಎಕರೆ ಮಾಡಿ. ಆದರೆ ನ್ಯಾಯವಾಗಿ ಮಾಡಿ. ಒಳ್ಳೆಯ ಮಾರ್ಗದಲ್ಲಿ ಸಂಪಾದನೆ ಮಾಡಿ. ಬೇಡ ಎಂದವರು ಯಾರು? ಈಗಾಗಲೇ ಬೆಂಗಳೂರು ಮೈಸೂರು ನಡುವೆ ಎಕ್ಸ್ ಪ್ರೆಸ್ ಹೆದ್ದಾರಿ ಆಗಿದೆ. ಮತ್ತೊಂದು ರಸ್ತೆ ಯಾಕೆ ಬೇಕು? ಬೆಂಗಳೂರಿನಿಂದ ಮೈಸೂರಿನ ತನಕ 1.75 ಲಕ್ಷ ಎಕರೆ ಜಮೀನು ಗುರುತಿಸಿದ್ದಾರೆ. ಅದನ್ನು ಲೂಟಿ ಹೊಡೆಯಬೇಕು. ನೈಸ್, ನೈಸೆಲ್ ಎಲ್ಲಾ ಹೋಗಿ ಡಿವೈನಿಟಿ ಅಂತ ಬರುತ್ತಿದೆ. ತೆಲಂಗಾಣದ ವ್ಯಕ್ತಿಗೆ ಇವರು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ. ಎಷ್ಟು ಕೋಟಿಗೆ ಡೀಲ್ ಆಗುತ್ತಿದೆ? ಮಹೇಶ್ ರೆಡ್ಡಿ ಎನ್ನುವ ವ್ಯಕ್ತಿ ಯಾರು ಎನ್ನುವ ಎಲ್ಲಾ ಮಾಹಿತಿಯೂ ನನ್ನ ಬಳಿ ಇದೆ. ಸಮಯ ಬರುತ್ತೆ ಎಲ್ಲಾ ವಿಚಾರ ನಿಮಗೆ ತಿಳಿಯುತ್ತದೆ ಎಂದು ಸಚಿವರು ಹೇಳಿದರು.

ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು; ರಸ್ತೆಯ ಉದೇಶಕ್ಕೆ ಸ್ವಾಧೀನ ಮಾಡಿಕೊಳ್ಳಲಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಡಿಕೆಶಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆ ಭಾಗದಲ್ಲಿ ಎಲ್ಲಿಯೇ ಆದರೂ ನಾನು ಜಮೀನು ಖರೀದಿ ಮಾಡಿರುವುದನ್ನು ರುಜುವಾತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಈ ಭೂಮಿ ಇರುವ ಪ್ರದೇಶಕ್ಕೆ ಮಾಧ್ಯಮಗಳನ್ನು ಮತ್ತು ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ತೋರಿಸಿದ ಸಚಿವ ಕುಮಾರಸ್ವಾಮಿ ಅವರು, ಇದು ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ಈ ಮುಖ್ಯಮಂತ್ರಿ ಸುಮಾರು 300 ಎಕರೆಯಷ್ಟು ಜಮೀನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪರಮಪೂಜ್ಯ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯ ಮಾಡಿದ ಸಚಿವ ಕುಮಾರಸ್ವಾಮಿ ಅವರು, ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ ಆತನ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾನೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ. ಇಲ್ಲಿ ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸುವ ಉದ್ಧೇಶದಿಂದ ಹೋರಾಟ ಮಾಡುತ್ತಿದ್ದೇನೆ. ಭೂಮಿ ಕಳೆದುಕೊಂಡ ಜನರು ಕೂಡ ಒಟ್ಟಾಗಿ ಹೋರಾಟಕ್ಕೆ ಧುಮುಕಬೇಕು. ನಾನು ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪೈಕಿ ಅಲ್ಲ. ತೆಲಂಗಾಣದ ಮಹೇಶ್ ರೆಡ್ಡಿ ಎಂಬಾತನ ಜತೆ ಸೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿ ಭೂಮಿ ಲೂಟಿ ಹೊಡೆಯಲು ಸಂಚು ಮಾಡಿದ್ದಾರೆ. ಆದರೆ ಈ ಲೂಟಿಗೆ ನಾನು ಅವಕಾಶ ಕೊಡುವುದಿಲ್ಲ. ಹೇಗಾದರೂ ಮಾಡಿ ರೈತರ ಭೂಮಿಯನ್ನು ಉಳಿಸಿಕೊಡುತ್ತೇನೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ಕೇಂದ್ರ ಸಚಿವರ ಜತೆ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಎ.ಮಂಜುನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಹಿರಿಯ ಮುಖಂಡ ರುದ್ರೇಶ್ ಸೇರಿದಂತೆ ಅನೇಕರು ಇದ್ದರು.