ರಾಮನಗರ, ಅಕ್ಟೋಬರ್. 1: ಹೃದಯಹೀನ ರಾಜ್ಯ ಸರ್ಕಾರ ವಿಶೇಷಚೇತನರ ಅಹವಾಲು ಕೇಳಲಿಲ್ಲ. ಕೂಡಲೇ ವಿಶೇಷಚೇತನರ ಮಾಸಾಶನವನ್ನು 5,000 ರೂ. ಏರಿಕೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ರಾಮನಗರದಲ್ಲಿ ವಿಶೇಷಚೇತನರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷಚೇತನರಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ನೀವು ಮಾಡುತ್ತಿರುವ ಧರಣಿಗೆ ಪ್ರತಿಕ್ರಿಯೆಯಾಗಿ ಜಿಲ್ಲಾಧಿಕಾರಿ ನನ್ನೊಂದಿಗೆ ಮಾತಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಬರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ 700 ರೂ. ಇದ್ದ ಮಾಸಾಶನವನ್ನು 1,400 ರೂ. ಮಾಡಿದ್ದೆ ಎಂದು ತಿಳಿಸಿದರು.
ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಮಾಸಿಕ 3,000 ರೂ. ಅನ್ನು 10,000 ರೂ. ಮಾಡಿದ್ದೆ. ಈ ಮೂಲಕ ಅವರಿಗೆ ಔಷಧಿಗೆ ಸಹಾಯವಾಗಿತ್ತು. ಈಗ ವಿಶೇಷಚೇತನರ ಮಾಸಾಶನವನ್ನು 5,000 ರೂ. ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಾಗ ಅಲ್ಲಿನ ಬಿಜೆಪಿ ಸಿಎಂ 5,000 ರೂ.ಗೆ ಏರಿಕೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ 3,000 ರೂ. ಆಗಿದೆ ಎಂದು ತಿಳಿಸಿದರು.
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಸಾಶನವನ್ನು 5,000 ರೂ. ಗೆ ಏರಿಕೆ ಮಾಡಬೇಕಿತ್ತು. ಆದರೆ ಇದು ಹೃದಯ ಇಲ್ಲದ ಬಂಡೆ ಸರ್ಕಾರ ಎಂದು ಅಶೋಕ್ ಟೀಕಿಸಿದರು.
ರಾಮನಗರ ಸಿಎಂ ಅವರದ್ದೇ ಜಿಲ್ಲೆಯಾಗಿದೆ, ವಿಶೇಷಚೇತನರನ್ನು ಭೇಟಿಯಾಗಿ ಮಾತಾಡಬೇಕಿತ್ತು. ಎಷ್ಟು ಏರಿಸುತ್ತೇವೆಂದಾದರೂ ಭರವಸೆ ನೀಡಬೇಕಿತ್ತು. ಐದಾರು ತಿಂಗಳಿಂದ ಯಾರಿಗೂ ಪಿಂಚಣಿಗಳು ಬರುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಬಯೋಮೆಟ್ರಿಕ್, ಸರ್ವೆ ಎಂದೆಲ್ಲ ನೆಪ ಹೇಳುತ್ತಾರೆ ಎಂದು ಟೀಕಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರು ರಸ್ತೆಗೆ ಜಲ್ಲಿ ಹಾಕಿ ಎಂದು ಅಧಿಕಾರಿಗಳ ಬಳಿ ಕೈ ಮುಗಿಯವ ಸ್ಥಿತಿ ಬಂದಿದೆ, ಒಬ್ಬ ಸಚಿವ ಎಂಜಿನಿಯರ್ ಬಳಿ ಮನವಿ ಮಾಡುತ್ತಾರೆಂದರೆ, ಕೈಯಿಂದ ಹಣ ಹಾಕಿ ರಸ್ತೆ ಮಾಡಿ ಎಂದರ್ಥ. ಒಬ್ಬ ಸಚಿವರು ಬಂದು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾರಂಟಿಗಳಿಂದಾಗಿ ಯಾರಿಗೂ ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ಸಚಿವ ಬಸವರಾಜ ರಾಯರೆಡ್ಡಿ ಅವರು ಗ್ಯಾರಂಟಿ ಬೇಕೋ ರಸ್ತೆ ಬೇಕೋ ಎಂದು ಪ್ರಶ್ನೆ ಮಾಡಿದ್ದಾರೆ. ಇದೆಲ್ಲ ನೋಡಿದರೆ ಇದು ಪಾಪರ್ ಸರ್ಕಾರ ಎಂದು ಅಶೋಕ್ ವ್ಯಂಗ್ಯವಾಡಿದರು.
ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವ ಕೆಲಸವಾಗಿತ್ತು. ಇಂತಹ ಕೆಲಸವನ್ನು ಈಗಿನ ಸರ್ಕಾರ ಮಾಡಬೇಕು. ಈಗಿನ ಕಾಲದ ದರಕ್ಕೆ ತಕ್ಕಂತೆ ಪಿಂಚಣಿ ಏರಿಸಬೇಕು ಎಂದು ತಿಳಿಸಿದರು.

