ಮೈಸೂರು: ಮೋದಿ, ಅಮಿತ್ ಶಾ ದೇಶದ್ರೋಹಿಗಳು ಎಂಬ ನಟ ಪ್ರಕಾಶ್ ರಾಜ್ ಹೇಳಿಕೆಗೆ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಪ್ರಕಾಶ್ ರಾಜ್ ಮತ್ತು ಪ್ರದೀಪ್ ಈಶ್ವರ್ ಇಬ್ಬರನ್ನು ಸಮಾಜವೇ ಹುಚ್ಚರು ಎಂದು ದೂರ ಇಟ್ಟಿದೆ. ಮೋದಿ 13 ವರ್ಷದಿಂದ ನನ್ನನ್ನು ಬಂಧಿಸಿಲ್ಲ ಎನ್ನುತ್ತಾರೆ, ಹುಚ್ಚರನ್ನು ಯಾರಾದರೂ ಜೈಲಿಗೆ ಹಾಕುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ಒಬ್ಬರು ಲೋಕಸಭೆ ಚುನಾವಣೆಯಲ್ಲಿ ನಿಂತು ಠೇವಣಿ ಕಳೆದುಕೊಂಡಿದ್ದಾರೆ. ಇನ್ನೊಬ್ಬರು ಎಂಎಲ್ಎ ಗ್ಯಾರಂಟಿ ಶಿಶು, ಮಿಸ್ ಆಗಿ ಐದು ವರ್ಷಕ್ಕೆ ಆಯ್ಕೆಯಾಗಿದ್ದಾರೆ. ನಾನು ಆನ್ ರೆಕಾರ್ಡ್ ಹೇಳುತ್ತೇನೆ, ಡಿ.ಕೆ. ಶಿವಕುಮಾರ್ ಮುಂದಿನ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‌ಗೆ ಟಿಕೆಟ್ ಕೊಡುವುದಿಲ್ಲ. ಅಲ್ಲಿ ಬೇರೆಯವರನ್ನು ಈಗಾಗಲೇ ಆಯ್ಕೆ ಮಾಡಿ ಇಟ್ಟಿದ್ದಾರೆ. ಐದು ವರ್ಷ ಏನೋ ಮಾತನಾಡಲಿ ಎಂದು ಸುಮ್ಮನೆ ಬಿಟ್ಟಿದ್ದಾರೆ ಎಂದು ಪ್ರತಾಪ್ ಸಿಂಹ ಟೀಕಾಪ್ರಹಾರ ನಡೆಸಿದರು.
ಆರ್‌ಎಸ್‌ಎಸ್ ಬಗ್ಗೆ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಡಿ.ಕೆ. ಶಿವಕುಮಾರ್‌ಗೆ ದೊಡ್ಡ ಕಂಟಕ ಇರುವುದೇ ಬಿ.ಕೆ ಮತ್ತು ಪಿ.ಕೆ ಯಿಂದ. ಇವರು ಇಬ್ಬರು ಹೀಗೆ ಮಾತನಾಡಿದರೆ ಜನ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಧೂಳಿಪಟ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್‌ಐಆರ್ ಕುರಿತು ವಿಶೇಷ ಅಧಿವೇಶನ ಕರೆಯಬೇಕು ಎಂಬ ಪ್ರಕಾಶ್ ರಾಜ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಡಿ.ಕೆ. ಶಿವಕುಮಾರ್ ಈ ವಿಚಾರವಾಗಿ ಮೊದಲೇ ಯಾಕೆ ಆಸಕ್ತಿ ವಹಿಸಿದ್ದರು ಎಂದು ಪ್ರಶ್ನಿಸಿದರು.
2002ರ ನಂತರ ಮತಪಟ್ಟಿ ಸರಿಯಾಗಿ ಪರಿಷ್ಕರಣೆಯಾಗಿಲ್ಲ. ಒಬ್ಬನೇ ಮತದಾರ ನಾಲ್ಕೈದು ಕಡೆ ಮತ ಹೊಂದಿರುತ್ತಾನೆ. ಬೆಂಗಳೂರಿನ ಜನಸಂಖ್ಯೆಗಿಂತ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಪ್ರತಿ ಚುನಾವಣೆಯಲ್ಲಿ ಕೇವಲ ಶೇ 40-50 ರಷ್ಟು ಮತದಾನವಾಗುತ್ತದೆ. ಎಸ್‌ಐಆರ್ ಬಳಿಕ 80% ಕ್ಕಿಂತ ಅಧಿಕ ಮತದಾನವಾಗುತ್ತದೆ ಎಂದು ಹೇಳಿದರು.
ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಪೆರಂಬೂರಿನಲ್ಲಿ ರಾಜೀವ್ ಗಾಂಧಿ ಹತ್ಯೆಯಾದಾಗ ಆಗಿನ ಚುನಾವಣಾ ಆಯುಕ್ತ ಶೇಷನ್ 21 ದಿನ ಚುನಾವಣೆ ಮುಂದೂಡಿದರು. ಆಗಲೇ 200 ಕ್ಷೇತ್ರಗಳಲ್ಲಿ ಚುನಾವಣೆ ಮುಗಿದಿತ್ತು. ಉಳಿದ ಕ್ಷೇತ್ರಗಳ ಪ್ರಚಾರದಲ್ಲಿ ರಾಜೀವ್ ಗಾಂಧಿ ಅಸ್ಥಿಯನ್ನು ಮುಂದಿಟ್ಟು ಸಹಾನುಭೂತಿ ಗಿಟ್ಟಿಸಿಕೊಂಡರು. ಸಹಾನುಭೂತಿಯಿಂದ ಪಿ.ವಿ. ನರಸಿಂಹರಾವ್ ಸರ್ಕಾರ ಬಂದಿತ್ತು. ಅದನ್ನು ನಾವು ಫ್ರಾಡ್ ಎಂದು ಹೇಳಿದ್ವಾ ಎಂದು ಪ್ರತಾಪ್ ಸಿಂಹ ಮಾರ್ಮಿಕವಾಗಿ ಪ್ರಶ್ನಿಸಿದರು.

