ಎಸ್‌ಐಆರ್; ಕಾಂಗ್ರೆಸ್ ದೊಡ್ಡ ಸಮಸ್ಯೆ ಮಾಡುತ್ತಿದೆ-ಛಲವಾದಿ ನಾರಾಯಣಸ್ವಾಮಿ

ಮೈಸೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಸ್‌ಐಆರ್ ವಿಚಾರದಲ್ಲಿ ದೊಡ್ಡ ಸಮಸ್ಯೆ ಹುಟ್ಟುಹಾಕಲು ಹೊರಟಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೂ ಎಸ್ಐಆರ್‌ಗೂ ಯಾವುದೇ ಸಂಬಂಧವಿಲ್ಲ. 20 ವರ್ಷಗಳಿಗೊಮ್ಮೆ ಎಸ್‌ಐಆರ್ ನಡೆಯುತ್ತಾ ಬಂದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲೂ ನಡೆದಿದೆ, ಈಗ ಬಿಜೆಪಿ ಆಡಳಿತಾವಧಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಈಗ ಕಾಕ್ರೋಚ್ ಜನತಾ ಪಾರ್ಟಿಯ ಫಾಲೋವರ್ ಆಗಿದೆ. ಸಿಜೆಪಿ ಇನ್ನೂ ರಾಜಕೀಯ ಪಕ್ಷವಾಗಿ ನೋಂದಣಿಯಾಗಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ಕಾಂಗ್ರೆಸ್ ನಾಯಕರು ಸಿಜೆಪಿಯ ಅಭಿಜಿತ್ ದೀಪ್ಸೆ ಅವರ ಫಾಲೋವರ್ಸ್ ಆಗಿದ್ದಾರೆ ಎಂದು ಟೀಕಿಸಿದರು.

ಎಸ್‌ಐಆರ್ ಮೂಲಕ ಅನರ್ಹರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕೆಲಸ ನಡೆಯುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶದ ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಲಾಗುತ್ತಿದೆ. ಅಂತವರಿಗೆ ಮತದಾನದ ಹಕ್ಕು ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕರು ಮಾತೆತ್ತಿದರೆ ಓಟ್ ಚೋರಿ ಎನ್ನುತ್ತಾರೆ. ಹಾಗಾದರೆ ಕರ್ನಾಟಕ, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಓಟ್ ಚೋರಿ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಎಸ್‌ಐಆರ್ ನಂತರ ಬೋಗಸ್ ಮತದಾರರನ್ನು ತೆಗೆದುಹಾಕುವ ಕೆಲಸವಾಗುತ್ತಿದೆ. ಇದರಿಂದ ಕಾಂಗ್ರೆಸ್‌ಗೆ ಆತಂಕ ಶುರುವಾಗಿದೆ ಎಂದು ಹೇಳಿದರು.

ಇವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ, ಕೇವಲ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಎಸ್‌ಐಆರ್ ವಿರೋಧಿಸುತ್ತಿದ್ದಾರೆ ಎಂದು ‌ಅಸಮಾಧಾನ‌‌ ವ್ಯಕ್ತಪಡಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿತ್ತು, ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿ 242 ಸ್ಥಾನ ಮಾತ್ರ ಗಳಿಸಲು ಸಾಧ್ಯವಾಯಿತು. ಇದು ವಾಸ್ತವವಾಗಿದ್ದರೂ ಕಾಂಗ್ರೆಸ್ ನಾಯಕರು ಓಟ್ ಚೋರಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ದೂರಿಟದರು.