ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು, ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ನವದೆಹಲಿಯ ಕರ್ನಾಟಕ ಭವನದ ಬಳಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಈ ರೀತಿ ಪ್ರತಿಕ್ರಿಯಿಸಿದರು.
ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ ಎಚ್ಚರಿಕೆ ಬಗ್ಗೆ ಕೇಳಿದ್ದಕ್ಕೆ, ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಮುಖ್ಯಮಂತ್ರಿಯಾದ ಬಳಿಕ ನಡೆದಿರುವ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದೇನೆ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವುದಿಲ್ಲ ಎಂದು ತಿಳಿಸಿದರು.
ತಮ್ಮ ವಿರುದ್ಧದ ಪ್ರಯತ್ನಗಳ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಬೇರೆ ರಾಜ್ಯದವರೂ ಇದ್ದಾರೆಯೇ ಎಂಬ ಪ್ರಶ್ನೆಗೆ,ನಾನು ನಿಮ್ಮ ಬಳಿ ಎಲ್ಲವನ್ನೂ ಬಹಿರಂಗಪಡಿಸಲು ಆಗುವುದಿಲ್ಲ,ಕಾಲ ಬಂದಾಗ ಉತ್ತರ ಕೊಡುತ್ತೇನೆ ಎಂದು ಖಡಕ್ಕಾಗಿ ಹೇಳಿದರು.
ಸಚಿವರನ್ನು ಸಿಕ್ಕಿ ಹಾಕಿಸಲು ಏಜೆಂಟರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದಾಗ,ಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ, ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ ಎಂದು ಡಿಕೆಶಿ ಹೇಳಿದರು.
ಹಿಂದೆ ಮಾಧ್ಯಮದಿಂದ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು. ಹಾಗಾಗಿ ಈಗಲೇ ಎಚ್ಚರಿಕೆ ನೀಡಲಾಗಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆ ಎಂದು ತಿಳಿಸಿದರು.
ಎಸ್ ಐ ಆರ್ ಬಗ್ಗೆ ಕಳೆದ ಎರಡು ದಿನಗಳಿಂದ ಹೋರಾಟ ನಡೆದಿರುವ ಬಗ್ಗೆ ಕೇಳಿದಾಗ,ಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ ಆ ಕೆಲಸಾನ ಮಾಡಲಿ ಎಂದು ಸಿಎಂ ಬಿಜೆಪಿಗರಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಬಡ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪೂರ್ವಮುದ್ರಿತ ಫಾರಂ 7 ಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರ ಪೂರ್ವ ಮುದ್ರಿತ ಅರ್ಜಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ. ಕೆಲವು ಬಿಜೆಪಿ ಕಾರ್ಯಕರ್ತರು ತಪ್ಪೊಪ್ಪಿಗೆ ಮಾಡಿಕೊಂಡು ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ. ಕೇಂದ್ರ ಸರ್ಕಾರದವರು ಈ ಮತಗಳ್ಳತನವನ್ನು ಒಂದು ದೊಡ್ಡ ಕ್ರಿಮಿನಲ್ ಸಂಚು ಎಂದು ಏಕೆ ಪರಿಗಣಿಸಲಿಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಬ್ಬಾಳಿಕೆ ನಡೆದಿದ್ದು, ಇಂದು ‘ಭಾರತೀಯ ಪ್ರಜಾಪ್ರಭುತ್ವದ ಕರಾಳ ದಿನ’ ಎಂದು ಪಕ್ಷ ಘೋಷಿಸಿದೆ. ಇದೊಂದು ಕರಾಳ ದಿನವಾಗಿದ್ದು, ಇಡೀ ದೇಶದ ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ಮಾಡಿದೆ. ನಾನು ಅಲ್ಲಿ ಭಾಗವಹಿಸಬೇಕಿತ್ತು. ಜಿ.ಎಸ್.ಟಿ ಸಭೆಯಲ್ಲಿ ಭಾಗವಹಿಸಬೇಕಿದ್ದರಿಂದ ಭಾಗವಹಿಸಲಾಗಲಿಲ್ಲ ಎಂದು ಡಿಕೆಶಿ ಸ್ಪಷ್ಟ ಪಡಿಸಿದರು.

