ನೈಸ್ ಅಕ್ರಮ ಮರೆಮಾಚಲು ಸ್ಟಿಂಗ್ ಸ್ಟಂಟ್ ಮಾಡಿದ ಡಿಕೆಶಿ -ಎಚ್ಡಿಕೆ

ನವದೆಹಲಿ, ಅ. 8- ಸ್ಟಿಂಗ್ ಆಪರೇಶನ್ ಮಾಡುವುದರಲ್ಲಿ ಮಾಸ್ಟರ್ ಆಗಿರುವ ವ್ಯಕ್ತಿಯೇ ತನ್ನ ವಿರುದ್ಧ ಸ್ಟಿಂಗ್ ನಡೆಯುತ್ತಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಸ್ಟಿಂಗ್ ಮಾಡುವ ಗುರುವಿಗೇ ತಿರುಮಂತ್ರ ಹೇಳಲು ಸಾಧ್ಯವೇ? ಹಾಗೇನಾದರೂ ಆಗಿದ್ದರೆ ತನಿಖೆ ಮಾಡಿಸಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ನನ್ನನ್ನು ಟ್ರ್ಯಾಪ್ ಮಾಡಲಿಕ್ಕೆ ಬಂದಿದ್ದರು, ಆ ವಿಷಯ ಪೊಲಿಸರಿಗೂ ಗೊತ್ತು. ಹಲವಾರು ಫೋಟೋಗಳು ಇವೆ ಎಂದು ಬೇರೆ ಹೇಳಿದ್ದಾರೆ. ಸ್ಟಿಂಗ್ ಮಾಡಿದ ಆ ಪಿತಾಮಹ ಯಾರು ಅಂತಲೂ ಗೊತ್ತು ಎಂದಿದ್ದಾರೆ. ಅವರೆಲ್ಲಾ ಯಾರೂ ಎಂಬುದನ್ನು ಜನಗಳ ಮುಂದೆ ಇಡಿ ಎಂದು ಅವರು ಹೇಳಿದರು.

ಈ ಮುಖ್ಯಮಂತ್ರಿ ನೀಡುತ್ತಿರುವ ಹೇಳಿಕೆಗಳೇ ಅವರ ವ್ಯಕ್ತಿತ್ವವನ್ನು ತೋರಿಸುತ್ತವೆ. ಜನರ ಗಮನವನ್ನು ಬೇರೆಡೆ ತಿರುಗಿಸಲು ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ನೈಸ್ (NICE) ಕಂಪನಿಗೆ ಸಂಬಂಧಿಸಿದ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದಾಗ ಉಂಟಾದ ಮುಜುಗರವನ್ನು ಮರೆಮಾಚಲು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆಂದು ಎಚ್ಡಿಕೆ ಹೇಳಿದರು.

ಮುಖ್ಯಮಂತ್ರಿಗಳು ಕ್ಯಾಬಿನೆಟ್ ನಲ್ಲಿ ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನನ್ನನ್ನು ಟ್ರ್ಯಾಪ್ ಮಾಡಲಿಕ್ಕೆ ಬಂದಿದ್ದರು. ಆ ವಿಚಾರ ಪೊಲಿಸರಿಗೂ ಗೊತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಇವೆ, ಫೋಟೋಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಆ ಪಿತಾಮಹ ಯಾರು ಅಂತಲೂ ಗೊತ್ತು ಎಂದಿದ್ದಾರೆ. ಹಾಗಾದರೆ ಯಾರು ಆ ಪಿತಾಮಹ? ಅವರ ಬಗ್ಗೆ ಮಾಹಿತಿ ಇದ್ದರೆ ಜನಗಳ ಮುಂದೆ ಇಡಿ. ಅದಕ್ಕೆ ಯಾಕೆ ಹಿಂಜರಿಯುತ್ತೀರಿ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.

ರಾಜ್ಯದ ಸಿಎಂ ಆಗಿ, ಹಿಂದಿನ ಸಿಎಂ ಸಿದ್ದರಾಮಯ್ಯ ಅವರನ್ನು ಟ್ರ್ಯಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆ ವಿಷಯವನ್ನು ಯಾಕೆ ಮುಚ್ಚಿಟ್ಟಿದ್ದೀರಿ? ಯಾಕೆ ಮುಚ್ಚಿಡುತ್ತಿದ್ದಿರಾ? ರಾಜ್ಯದ ಸಿಎಂ ಆಗಿದ್ದವರನ್ನು, ಹಾಲಿ ಮುಖ್ಯಮಂತ್ರಿಯನ್ನು ಟ್ರ್ಯಾಪ್ ಮಾಡತಕ್ಕದ್ದು ಅಂದರೆ ಏನರ್ಥ? ಎಲ್ಲಾ ಮಾಹಿತಿ ಇದ್ದರೂ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ? ಎಂದು ಕೇಂದ್ರ ಸಚಿವರು ಕೇಳಿದರು.

ಸ್ಟಿಂಗ್ ಮಾಡಲು ಬಂದವರನ್ನು ಹಿಡಿಯದೇ ಕಡಲೆಪುರಿ ತಿನ್ನುತ್ತಿದ್ದೀರಾ? ಎಲ್ಲಾ ವಿಷಯ ಗೊತ್ತಿದ್ದರೂ ಅವರನ್ನು ಯಾಕೆ ಹಿಡಿಯಲಿಲ್ಲ? ಈ ನೈಸ್ ಸಂಸ್ಥೆ ಮಾಲೀಕ ನಿಮ್ಮನ್ನು ಭೇಟಿ ಮಾಡಿ ಹೋದರು. ಅವರೇ ಏನಾದರೂ ನಿಮ್ಮನ್ನು ಟ್ರ್ಯಾಪ್ ಮಾಡಲಿಕ್ಕೆ ಪ್ರಯತ್ನ ಮಾಡ್ತಿದ್ದಾರೋ ಎಂಬ ಸತ್ಯವನ್ನ ನೀವೇ ಹೇಳಬೇಕು. ನಿಮ್ಮ ಹೇಳಿಕೆಗಳು ಹೇಗಿವೆ ಎಂದರೆ l ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗಿದೆ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಈ ಹಿಂದೆಯೂ ನನ್ನನ್ನು ಒಂದು ಮಾಧ್ಯಮದವರು ಟ್ರ್ಯಾಪ್ ಮಾಡಲಿಕ್ಕೆ ಬಂದು ಸ್ವತಃ ನನಗೇ ಸಿಕ್ಕಿ ಹಾಕಿಕೊಂಡರು ಎಂದು ಹೇಳಿದ್ದೀರಿ. ಮೊನ್ನೆ ನೂರು ದಿನದ ಮಾಧ್ಯಮಗೋಷ್ಟಿಯಲ್ಲಿ ಕೂಡ ಆ ಮಾತನ್ನು ಪುನರುಚ್ಚಾರ ಮಾಡಿದ್ದೀರಿ. ಇವಾಗ ಯಾರು ಬಂದಿದ್ದರು? ಯಾವ ವ್ಯಕ್ತಿ ಬಂದಿದ್ದರು? ಯಾವ ಪಿತಾಮಹ ಬಂದಿದ್ದರು? ನೀವಿದ್ದ ಜಾಗದಲ್ಲಿ ಸಿಸಿ ಕ್ಯಾಮೆರಾ ಇರಬೇಕಲ್ಲಾ? ಎಲ್ಲವನ್ನೂ ತೆಗೆಸಿ. ನಿಮ್ಮ ಹಳೆಯ ಚಾಳಿ ಬಗ್ಗೆ ಜನರ ಮೇಲೆ ಹೇಳಿ ಸ್ಟಂಟ್ ಮಾಡುತ್ತಿದ್ದೀರಿ. ಇದು ಹೇಗಿದೆ ಎಂದರೆ ಗುರುವಿಗೆ ತಿರುಮಂತ್ರದ ತರಹ ಇದೆ. ಯಾರು ಅವರು ಅಂತ ಜನಗಳ‌ ಮುಂದೆ ಹೇಳಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.

ಈ ಹಿಂದೆ ರಮೇಶ್ ಜಾರಕಿಹೊಳಿ ಅವರನ್ನು ಟ್ರ್ಯಾಪ್ ಮಾಡುವ ಕೆಲಸ ಮಾಡಿದ್ದು ಯಾರು?ಮಾಜಿ ಮಂತ್ರಿ ಕೆ.ಎನ್. ರಾಜಣ್ಣ ಅವರು ವಿಧಾನಸಭೆಯಲ್ಲೇ 40-48 ಜನರ ಟ್ರ್ಯಾಪ್ ಬಗ್ಗೆ ಅಸ್ಲೆಂಬಿಯಲ್ಲಿ ಮಾತನಾಡಿದ್ದರು. ನಮ್ಮ ಮಂತ್ರಿಮಂಡಲದ ಮಂತ್ರಿಯೇ ಮೂಲಪುರುಷನೇ ಇದ್ದಾನೆ ಎಂದು ರಾಜಣ್ಣ ಹೇಳಿದ್ದರು. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಾವ ರೀತಿ ಮುಗಿಸಿದಿರಿ ಎನ್ನುವುದನ್ನು ನಾನು ಬಲ್ಲೆ. ಸತ್ಯ ಹೇಳಿ, ಇದೆಲ್ಲಾ ನಿಮ್ಮದೇ ಕೈವಾಡ ಅಲ್ಲವೇ? ಎಂದು ಡಿಕೆಶಿಯನ್ನು ನೇರವಾಗಿ ಪ್ರಶ್ನಿಸಿದರು.

ಸ್ಟಿಂಗ್ ಯಾರು ಮಾಡಲು ಬಂದರು ಎಂಬುದನ್ನು ಮುಖ್ಯಮಂತ್ರಿ ಹೇಳಲೇಬೇಕಾಗುತ್ತದೆ. ಅವರು ಹೇಳಿಕೆ ಕೊಟ್ಟು ಸುಮ್ಮನೆ ಇರೋಕೆ ಆಗೋದಿಲ್ಲ. ಮುಖ್ಯಮಂತ್ರಿ ವಿರುದ್ಧವೇ ಟ್ರ್ಯಾಪ್ ನಡೆಯುತ್ತಿದೆ ಎಂದರೆ ಸಾಮಾನ್ಯ ವಿಷಯವಲ್ಲ. ಇದೆಲ್ಲಾ ತನಿಖೆಗೆ ಒಳಪಡಬೇಕು. ರಾಜ್ಯಪಾಲರನ್ನು ಭೇಟಿಗೆ ತೆರಳಿದ್ದವರಲ್ಲಿ ಒಬ್ಬರು ಇದ್ದಾರೆ ಎಂದು ಹೇಳಿದ್ದೀರಾ? ಯಾರು ಅವರು? ಎಂಬುದನ್ನು ಅವರು ಹೇಳಬೇಕಾಗುತ್ತದೆ ಎಂದು ಕೇಂದ್ರ ಒತ್ತಾಯಿಸಿದರು.

ಮಾಜಿ ಶಾಸಕ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಅವರು ಹಾಜರಿದ್ದರು.