ಸೌರವ್ ದಾಸ್, ಅಶುತೋಷ್ ರಾಂಕಾ 5 ದಿನ ತಿಹಾರ್ ಜೈಲಿಗೆ

ನವದೆಹಲಿ: ಜಂತರ್ ಮಂತರ್‌ಗೆ ಅಕ್ರಮ ಪ್ರವೇಶ ಮಾಡಿ ಬಾಂಡ್‌ ಷರತ್ತು ಉಲ್ಲಂಘಿಸಿದ್ದಕ್ಕೆ ಕಾಕ್ರೋಚ್ ಜನತಾ ಪಾರ್ಟಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ತಿಹಾರ್ ಜೈಲು ಪಾಲಾಗಿದ್ದಾರೆ.

ಅವರಿಬ್ಬರನ್ನು ದೆಹಲಿ ಪೊಲೀಸರು ಐದು ದಿನಗಳ ಕಾಲ ತಿಹಾರ್ ಜೈಲಿಗೆ ಕಳುಹಿಸಿದ್ದಾರೆ.ಇದೇ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಅಜಿಂಕ್ಯ ಶಿಂಧೆ ಶಾಂತಿ ಬಾಂಡ್‌ಗೆ ಸಹಿ ಹಾಕಿದ ನಂತರ ಬಿಡುಗಡೆಯಾಗಿದ್ದಾರೆ.

ಬುಧವಾರ ಈ ಮೂವರನ್ನು ಸ್ಪೆಷಲ್‌ ಎಕ್ಸ್‌ಕ್ಯೂಟಿವ್‌ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ, ಅಗತ್ಯ ಬಾಂಡ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಜಿಂಕ್ಯ ಶಿಂಧೆ ಅವರನ್ನು ಬಿಡುಗಡೆ ಗೊಳಿಸುವಂತೆ ಸೂಚಿಸಿದರು.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಶನಿವಾರ ನಡೆದಿದ್ದ ಪ್ರತಿಭಟನೆ ವೇಳೆ ವಶಕ್ಕೆ ಪಡೆಯಲಾಗಿದ್ದ ದಾಸ್ ಮತ್ತು ರಾಂಕಾ, ಒಂದು ವರ್ಷದವರೆಗೆ ಶಾಂತಿ ಕಾಪಾಡುವುದಾಗಿ ಬಾಂಡ್ ಬರೆದುಕೊಟ್ಟಿದ್ದರು.

ಬಾಂಡ್‌ಗೆ ಸಹಿ ಹಾಕಿದ್ದರೂ ನಿರ್ಬಂಧಿತ ಜಂತರ್ ಮಂತರ್ ಪ್ರವೇಶಿಸಿದ ಕಾರಣ ಅವರ ವಿರುದ್ಧ ಅಕ್ರಮ ಪ್ರವೇಶ, ನಿಷೇಧಾಜ್ಞೆ ಉಲ್ಲಂಘನೆ, ಶಾಂತಿ ಬಾಂಡ್ ಷರತ್ತು ಮುರಿಯುವಿಕೆ ಹಾಗೂ ಕರ್ತವ್ಯನಿರತ ಸರ್ಕಾರಿ ಸಿಬ್ಬಂದಿಗೆ ಅಡ್ಡಿಪಡಿಸಿದ ಆರೋಪಗಳಡಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.