ಬೆಂಗಳೂರು: ಸ್ಟಿಂಗ್ ಆಪರೇಷನ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಒಳಸಂಚು ಹೂಡಿ ಅವರ ಪದಚ್ಯುತಿಗೆ ಕಾರಣವಾದ ರಾಕೇಶ್ ಶೆಟ್ಟಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಧಿಡೀರ್ ಪಾದಯಾತ್ರೆ ನಡೆಸಿದರು.
ಕುಮಾರಸ್ವಾಮಿ ಅವರು ಗುರುವಾರ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲ ಮೇಲೆ ಧರಣಿ ನಡೆಸಿ ರಾಕೇಶ್ ಶೆಟ್ಟಿ ಹಾಗೂ ಸಹಚರನನ್ನು ಬಂಧಿಸಲು ಎರಡು ದಿನಗಳ ಗಡುವು ನೀಡಿದ್ದರು.
ಆದರೆ ಪೊಲೀಸರು ಸ್ಟಿಂಗ್ ಸಂಚುಕೋರರನ್ನು ಬಂಧಿಸಲು ವಿಫಲವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಿಂದ ಪಾದಯಾತ್ರೆ ಆರಂಭಿಸಿ, ಅಸಂಖ್ಯಾತ ಕಾರ್ಯಕರ್ತರು, ಮುಖಂಡರೊಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿದರು.
ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ನಡೆಸಿದ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವ ರಾಕೇಶ್ ಶೆಟ್ಟಿ, ಬಾಗೇಪಲ್ಲಿ ಪ್ರಶಾಂತ್ ಹಾಗೂ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ನಾಯಕರು ಒತ್ತಾಯಿಸಿದರು.
ಪಾದಯಾತ್ರೆಗೆ ಅಡ್ಡಿಪಡಿಸಿದ ಪೊಲೀಸರು, ಫ್ರೀಡಂ ಪಾರ್ಕ್ ನಿಂದ ಮುಂದಕ್ಕೆ ಹೋಗಲು ಅವಕಾಶ ಆಗದಂತೆ ಬಸ್ಸುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬ್ಲಾಕ್ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಯುವಂತೆ ಮಾಡಿದರು ಎಂದು ಗಂಭೀರ ಆರೋಪ ಮಾಡಿದರು.
ನನ್ನ ಹೋರಾಟ ವೈಯಕ್ತಿಕವಲ್ಲ. ವಿಜಯದಶಮಿ ಹಬ್ಬದ ಬಳಿಕ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಕೇಂದ್ರ ಸಚಿವರು ತಿಳಿಸಿದರು.
ಇದಾದ ಮೇಲೆ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರನ್ನು ಭೇಟಿಯಾದ ಕೇಂದ್ರ ಸಚಿವರು, ಎರಡು ದಿನಗಳ ಹಿಂದೆ ಸ್ಟಿಂಗ್ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಗಡುವು ನೀಡಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ನೀವು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಡಿಜಿ ಸಲೀಂ ಅವರನ್ನು ಭೇಟಿಯಾದ ಜೆಡಿಎಸ್ ನಿಯೋಗದಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ಡಿ.ಸಿ. ತಮ್ಮಣ್ಣ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ರಾಜ್ಯ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಸಂಸದ ಎಂ. ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಶಾಸಕರಾದ ಟಿ.ಎ. ಶರವಣ, ಕರೆಮ್ಮ ನಾಯಕ, ಹೆಚ್.ಟಿ. ಮಂಜುನಾಥ್, ಸಿ.ಎನ್. ಮಂಜೇಗೌಡ, ಮಾಜಿ ಶಾಸಕರಾದ ಕೆ.ಅನ್ನದಾನಿ, ಎ. ಮಂಜುನಾಥ್, ಅಖಂಡ ಶ್ರೀನಿವಾಸಮೂರ್ತಿ, ಶಿವಶಂಕರ್, ದೊಡ್ಡನಗೌಡ ಪಾಟೀಲ, ವಕ್ತಾರರಾದ ದೇವರಾಜ್, ಪ್ರದೀಪ್ ಕುಮಾರ್, ಯುವ ಮುಖಂಡ ಪ್ರವೀಣ್ ಸೇರಿದಂತೆ ಅನೇಕರು ಇದ್ದರು.

