ಕಬ್ಬು ಬೆಳೆಗಾರರ ಬೇಡಿಕೆ; ತುರ್ತು ಮಧ್ಯಪ್ರವೇಶಿ ಸಲು: ಪಿಎಂಗೆ ಸಿಎಂ ಮನವಿ

ಬೆಂಗಳೂರು: ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದ್ದು, ಕರ್ನಾಟಕದ ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಧಾನಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಕಬ್ಬು ಬೆಳೆಗಾರರ ಬೇಡಿಕೆ ಸಂಬಂಧ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದು, ಅನೇಕ ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆ 14.2.2019 ರಿಂದ ಪ್ರತಿ ಕೆಜಿಗೆ 31ರೂನಲ್ಲೇ ಉಳಿದಿದೆ, ಆದರೆ ಎಫ್ ಆರ್ ಪಿ ಪ್ರತಿ ಟನ್ಗೆ 2,750 ರೂ ನಿಂದ 3,650 ಕ್ಕೆ ಏರಿದೆ. 2019 ರ ಸಕ್ಕರೆ ಬೆಲೆಯಲ್ಲಿ ಕಾರ್ಖಾನೆಗಳು ಕಬ್ಬಿಗೆ ನ್ಯಾಯಯುತ ಬೆಲೆಯನ್ನು ಪಾವತಿಸಲು ಸಾಧ್ಯವಿಲ್ಲ. ಹಾಗಾಗಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪರಿಷ್ಕರಿಸಿ ಎಂದು ಕೋರಿದ್ದಾರೆ.

ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿಪಡಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

2026-27 ರಲ್ಲಿ ತೈಲ ಮಾರಾಟ ಕಂಪನಿಗಳು 16.10.2026ರಂದು ಬಿಡುಗಡೆ ಮಾಡಿದ ಟೆಂಡರ್ ನಲ್ಲಿ, ಕಬ್ಬಿನ ಹಾಲು, ಸಕ್ಕರೆ ಸಿರಪ್ ಮತ್ತು ಬಿ-ಹೆವಿ ಮೋಲಾಸಸ್ಗಳಿಂದ ಉತ್ಪಾದಿಸುವ ಎಥನಾಲ್ ಅನ್ನು ಹೊರಗಿಡಲಾಗಿದೆ, ಆದರೆ ಸಿ-ಹೆವಿ ಮೋಲಾಸಸ್ಗಳಿಂದ ಉತ್ಪಾದಿಸುವ ಎಥನಾಲ್ ಅರ್ಹವಾಗಿದೆ. ಕರ್ನಾಟಕವು ವರ್ಷಕ್ಕೆ 225 ಕೋಟಿ ಲೀಟರ್ ಕಬ್ಬು ಆಧಾರಿತ ಎಥನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಈ ಕಚ್ಚಾವಸ್ತುಗಳನ್ನು ಹೊರಗಿಡುವುದರಿಂದ ಸಕ್ಕರೆ ಕಾರ್ಖಾನೆಗಳ ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಮತ್ತು ಕಬ್ಬು ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವ ಅವರ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆದ್ದರಿಂದ, ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಕಾರ್ಖಾನೆಗಳ ಸ್ಥಾಪಿತ ಸಾಮರ್ಥ್ಯಕ್ಕೆ ಅನುಗುಣವಾಗಿ ಕಬ್ಬು ಆಧಾರಿತ ಕಚ್ಚಾವಸ್ತುಗಳಿಂದ ಎಥನಾಲ್ ಉತ್ಪಾದನೆಗೆ ನ್ಯಾಯಯುತ ಹಂಚಿಕೆ ಮಾಡಬೇಕು ಎಂದು ಸಿಎಂ ವಿನಂತಿಸಿದ್ದಾರೆ.

ಕಬ್ಬಿಗೆ ಪಾವತಿಸಬೇಕಾದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯಲ್ಲಿ ವಾರ್ಷಿಕ ಹೆಚ್ಚಳವಾಗುತ್ತಿದ್ದರೂ, ಕಬ್ಬಿನ ಹಾಲು ಮತ್ತು ಬಿ-ಹೆವಿ ಮೋಲಾಸಸ್ಗಳಿಂದ ಉತ್ಪಾದಿಸುವ ಎಥನಾಲ್ ಬೆಲೆಗಳು 2022-23 ರಿಂದ ಬದಲಾಗದೆ ಉಳಿದಿವೆ. ಇದಕ್ಕೆ ವ್ಯತಿರಿಕ್ತವಾಗಿ, ಧಾನ್ಯ ಆಧಾರಿತ ಎಥನಾಲ್ ಬೆಲೆಗಳನ್ನು ಕಳೆದ ಕೆಲವು ವರ್ಷಗಳಿಂದ ಹೆಚ್ಚಿಸಲಾಗಿದೆ. ಆದ್ದರಿಂದ, ಹೆಚ್ಚುತ್ತಿರುವ ಕಬ್ಬಿನ ವೆಚ್ಚವನ್ನು ಸರಿದೂಗಿಸಲು ಕಬ್ಬು ಆಧಾರಿತ ಎಥನಾಲ್ ಬೆಲೆಯನ್ನು ಸೂಕ್ತವಾಗಿ ಪರಿಷ್ಕರಿಸಬೇಕು ಮನವಿ ಮಾಡಿದ್ದಾರೆ.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ವಲಯದ ಸಮಸ್ಯೆಗಳನ್ನು ಪರಿಶೀಲಿಸಲು ನೀತಿ ಆಯೋಗದ ಮಾಜಿ ಸದಸ್ಯ ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ 14.10.2026 ರಂದು ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯನ್ನು ಕರ್ನಾಟಕ ಸರ್ಕಾರವು ಸ್ವಾಗತಿಸುತ್ತದೆ.

ಕಬ್ಬು ಬೆಳೆಗಾರರು ಹುಬ್ಬಳ್ಳಿಗೆ ಪಾದಯಾತ್ರೆ ಮಾಡುತ್ತಿದ್ದು, ತಾವು ಅಕ್ಟೋಬರ್ 17 ರಂದು ಕಿತ್ತೂರಿನಲ್ಲಿ ಕಬ್ಬು ಬೆಳೆಗಾರರ ಮನವೊಲಿಸಲು ಪ್ರಯತ್ನಿಸಿದ ಬಗ್ಗೆ ಡಿಕೆಶಿ ಪ್ರಧಾನ ಮಂತ್ರಿಯವರ ಗಮನ ಸೆಳೆದಿದ್ದಾರೆ‌.

ಕಬ್ಬು ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಕ್ಕರೆ ಕಾರ್ಖಾನೆಗಳ ತೂಕದಲ್ಲಿನ ಅಕ್ರಮ ತಡೆಗೆ ಡಿಜಿಟಲ್ ಲೋಡ್ ಸೆಲ್ಗಳ ಅಳವಡಿಕೆ, ಜಿಲ್ಲಾ ಮಟ್ಟದ ತಂಡಗಳಿಂದ ಮಾಸಿಕ ಪರಿಶೀಲನೆ ಹಾಗೂ ಪ್ರಯೋಗಾಲಯಗಳಿಗೆ NABL ಮಾನ್ಯತೆ ನಿರ್ದೇಶನ ಮುಂತಾದ ಕ್ರಮ ಕೈಗೊಳ್ಳಲಾಗಿದೆ. ಆದರೆ ರೈತರ ಪ್ರಮುಖ ಬೇಡಿಕೆಗಳನ್ನು ಭಾರತ ಸರ್ಕಾರ ಮಾತ್ರ ಈಡೇರಿಸಲು ಸಾಧ್ಯ ಎಂದು ಸಿಎಂ ಪತ್ರದಲ್ಲಿ ವಿವರಿಸಿದ್ದಾರೆ.

ಲಕ್ಷಾಂತರ ಕಬ್ಬು ಬೆಳೆಗಾರರ ಮತ್ತು ಕರ್ನಾಟಕದ ಜನರ ಹಿತದೃಷ್ಟಿಯಿಂದ ನಿಮ್ಮ ತುರ್ತು ಮಧ್ಯಪ್ರವೇಶ ಅತ್ಯಗತ್ಯವಾಗಿದೆ ಎಂದು ಪ್ರಧಾನ ಮಂತ್ರಿಯವರಿಗೆ ಸಿಎಂ ಡಿ ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.