ಮೈಸೂರು ಜಾಕಿ ಕ್ವಾಟ್ರಸ್ ಪಾರ್ಕ್‌ನಲ್ಲಿ ಭಾರೀ ಹೆಬ್ಬಾವು ಪತ್ತೆ

ಮೈಸೂರು: ಮೈಸೂರಿನ ಜಾಕಿ ಕ್ವಾಟ್ರಸ್ ಬಳಿ ಪಾರ್ಕ್‌ನಲ್ಲಿ ಸೋಮವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು,ಸ್ಥಳೀಯರು ತೀವ್ರ ಆತಂಕಗೊಂಡರು.

ಪಾರ್ಕ್ ಬಳಿ ಇದ್ದ ಸ್ಥಳೀಯರು ಪೊದೆಯೊಳಗೆ ಚಲಿಸುತ್ತಿದ್ದ ಸುಮಾರು 10 ಅಡಿ ಉದ್ದದ ಹೆಬ್ಬಾವನ್ನು ಕಂಡು ತಕ್ಷಣ ಉರಗ ತಜ್ಞ ಸ್ನೇಕ್ ಪ್ರದೀಪ್ ಅವರಿಗೆ ಕರೆ ಮಾಡಿದ್ದಾರೆ.

ಕರೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸ್ನೇಕ್ ಪ್ರದೀಪ್, ಟಾರ್ಚ್ ಬೆಳಕಿನಲ್ಲಿ ಅತ್ಯಂತ ಜಾಗರೂಕತೆಯಿಂದ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ. ರಾತ್ರಿ ಯಾದ್ದರಿಂದ ಕಾರ್ಯಾಚರಣೆ ಸ್ವಲ್ಪ ಸವಾಲೇ ಆಗಿತ್ತು.

ಪ್ರದೀಪ್ ಅವರು‌ ಹಿಡಿದ ಹೆಬ್ಬಾವನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಗರದ ಹೊರ ವಲಯದಲ್ಲಿರುವ ಸಾಮಾಜಿಕ ಅರಣ್ಯದ ಅಂಚಿನಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಪಾರ್ಕ್‌ನಲ್ಲಿ ರಾತ್ರಿ ವೇಳೆ ಇಂತಹ ದೊಡ್ಡ ಹಾವು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪಾರ್ಕ್‌ನಲ್ಲಿನ ಪೊದೆಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.